ನೇಪಾಳ ಸಂಸತ್‌ಗೆ ಮರುಜೀವ ನೀಡಿದ ಸುಪ್ರೀಂ ಕೋರ್ಟ್

Update: 2021-02-24 18:11 GMT

ಕಠ್ಮಂಡು (ನೇಪಾಳ), ಫೆ. 24: ನೇಪಾಳದ ಸಂಸತ್ತನ್ನು ವಿಸರ್ಜಿಸುವ ಪ್ರಧಾನಿಯ ನಿರ್ಧಾರವನ್ನು ದೇಶದ ಸುಪ್ರೀಮ್ ಕೋರ್ಟ್ ಮಂಗಳವಾರ ತಳ್ಳಿಹಾಕಿದೆ ಹಾಗೂ ಈ ಕ್ರಮ ಅಸಾಂವಿಧಾನಿಕ ಎಂದು ಹೇಳಿದೆ.

ಪ್ರಧಾನಿ ಕೆ.ಪಿ. ಶರ್ಮ ಒಲಿ ಡಿಸೆಂಬರ್‌ನಲ್ಲಿ ಹೌಸ್ ಆಫ್ ರೆಪ್ರೆಸೆಂಟೇಟಿವ್ಸನ್ನು ಹಠಾತ್ ಆಗಿ ವಿಸರ್ಜಿಸಿದ್ದರು ಹಾಗೂ ತನ್ನದೇ ನೇಪಾಳ ಕಮ್ಯುನಿಸ್ಟ್ ಪಕ್ಷದ ಸದಸ್ಯರು ಸಹಕಾರ ನೀಡುತ್ತಿಲ್ಲ ಎಂದು ಆರೋಪಿಸಿದ್ದರು. ಎಪ್ರಿಲ್ ಅಥವಾ ಮೇ ತಿಂಗಳಲ್ಲಿ ಚುನಾವಣೆ ನಡೆಸಲು ಅವರು ಶಿಫಾರಸು ಮಾಡಿದ್ದರು.

ಅವರ ನಿರ್ಧಾರವನ್ನು ಪ್ರಶ್ನಿಸಿ ಹತ್ತಕ್ಕಿಂತಲೂ ಅಧಿಕ ರಿಟ್ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಲಾಗಿತ್ತು.

‘‘ಸರಕಾರದ ನಿರ್ಧಾರವು ಅಸಾಂವಿಧಾನಿಕ ಹಾಗೂ ಸಂಸದೀಯ ಸಂಪ್ರದಾಯಗಳಿಗೆ ವಿರುದ್ಧವಾಗಿದೆ ಎಂಬ ಅಭಿಪ್ರಾಯವನ್ನು ಸುಪ್ರೀಂ ಕೋರ್ಟ್ ವ್ಯಕ್ತಪಡಿಸಿತು ಹಾಗೂ ಹೌಸ್ ಆಫ್ ರೆಪ್ರೆಸೆಂಟೇಟಿವ್ಸನ್ನು ಮರುಸ್ಥಾಪಿಸುವಂತೆ ಆದೇಶಿಸಿತು’’ ಎಂದು ಸುಪ್ರೀಂ ಕೋರ್ಟ್‌ನ ವಕ್ತಾರರೊಬ್ಬರು ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದರು.

ಪ್ರಧಾನಿ ಕೆ.ಪಿ. ಶರ್ಮ ಒಲಿ ರಾಜೀನಾಮೆ ನೀಡುವುದಿಲ್ಲ

ಸುಪ್ರೀಂ ಕೋರ್ಟ್ನ ಪ್ರತಿಕೂಲ ತೀರ್ಪಿನ ಹೊರತಾಗಿಯೂ ನೇಪಾಳ ಪ್ರಧಾನಿ ಕೆ.ಪಿ. ಶರ್ಮ ಒಲಿ ರಾಜೀನಾಮೆ ನೀಡುವುದಿಲ್ಲ, ಬದಲಿಗೆ ಸಂಸತ್ತಿನಲ್ಲಿ ವಿಶ್ವಾಸಮತ ಕೋರಲಿದ್ದಾರೆ ಎಂದು ಅವರ ಸಹಾಯಕರೊಬ್ಬರು ಬುಧವಾರ ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ, 69 ವರ್ಷದ ಒಲಿ ಆಡಳಿತಾರೂಢ ನೇಪಾಳ ಕಮ್ಯುನಿಸ್ಟ್ ಪಾರ್ಟಿಯ ಕೆಲವು ಮಿತ್ರರನ್ನು ಭೇಟಿಯಾಗಿದ್ದಾರೆ.
ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ, ಪ್ರಧಾನಿ ಒಲಿ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಸಾವಿರಾರು ಮಂದಿ ಬುಧವಾರ ರಾಜಧಾನಿ ಕಠ್ಮಂಡುವಿನ ಬೀದಿಗಳಲ್ಲಿ ಧರಣಿ ನಡೆಸಿದರು.
‘‘ಪ್ರಧಾನಿ ಒಲಿ ಈಗ ರಾಜೀನಾಮೆ ನೀಡುವುದಿಲ್ಲ. ಅವರು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ’’ ಎಂದು ಅವರ ಸಹಾಯಕ ಸೂರ್ಯ ಥಾಪ ‘ರಾಯ್ಟರ್ಸ್’ ಸುದ್ದಿ ಸಂಸ್ಥೆಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News