ಲಿಬಿಯ ಸಮುದ್ರ ಪ್ರದೇಶದಲ್ಲಿ ದೋಣಿ ಮುಳುಗಿ ಕನಿಷ್ಠ 15 ವಲಸಿಗರ ಜಲಸಮಾಧಿ

Update: 2021-02-28 17:22 GMT
ಸಾಂದರ್ಭಿಕ ಚತ್ರ

 ಟ್ರಿಪೋಲಿ,ಫೆ.28: ಯುರೋಪ್ ದೇಶದಲ್ಲಿ ವಲಸೆಗೆ ಯತ್ನಿಸುತ್ತಿದ್ದ ಆಫ್ರಿಕನ್ನರಿದ್ದ ದೋಣಿಯೊಂದು ಲಿಬಿಯದ ಸಮುದ್ರ ಪ್ರದೇಶದಲ್ಲಿ ಮುಳುಗಿದ್ದು, ಕನಿಷ್ಠ 15 ಮಂದಿ ಮೃತಪಟ್ಟಿದ್ದಾರೆಂದು ವಿಶ್ವಸಂಸ್ಥೆಯ ವಕ್ತಾರೆಯೊಬ್ಬರು ಶನಿವಾರ ತಿಳಿಸಿದ್ದಾರೆ.

ಯುರೋಪ್‌ಗೆ ವಲಸೆ ಹೋಗುತ್ತಿದ್ದ ವಲಸಿಗರ ದೋಣಿಯೊಂದು ಸಮುದ್ರ ಪಾಲಾಗಿರುವುದು ಕಳೆದ ಒಂದು ವಾರದಲ್ಲಿ ಇದು ಎರಡನೇ ಸಲವಾಗಿದೆ.

ಜಲಸಮಾಧಿಯಾದ ರಬ್ಬರ್ ದೋಣಿಯಲ್ಲಿ ಕನಿಷ್ಠ 110 ವಲಸಿಗರಿದ್ದರೆನ್ನಲಾಗಿದೆ. ಅವರು ಲಿಬಿಯದ ಕರಾವಳಿ ಪಟ್ಟಣವಾದ ಝಾವಿಯಾದಿಂದ ತಮ್ಮ ಪ್ರಯಾಣವನ್ನು ಶುಕ್ರವಾರ ಆರಂಭಿಸಿದ್ದರು.

 ರವಿವಾರ ಮುಂಜಾನೆಯ ವೇಳೆಗೆ ಈ ದೋಣಿಯು ಮುಳುಗತೊಡಗಿದ್ದು, ಲಿಬಿಯದ ತಟರಕ್ಷಣಾ ಸಿಬ್ಬಂದಿ ಆರು ಮಹಿಳೆಯರು, ಇಬ್ಬರು ಮಕ್ಕಳು ಸೇರಿದಂತೆ ಕನಿಷ್ಠ 95 ವಲಸಿಗರನ್ನು ರಕ್ಷಿಸುವಲ್ಲಿ ಸಫಲವಾಗಿದೆಯೆಂದು ವಿಶ್ವಸಂಸ್ಥೆಯ ಅಂತರ್ ರಾಷ್ಟ್ರೀಯ ವಲಸೆ ಸಂಸ್ಥೆಯ ವಕ್ತಾರೆ ಸಫಾ ಮಸೆಹಿಲಿ ತಿಳಿಸಿದ್ದಾರೆ

ದುರಂತದಲ್ಲಿ ಬದುಕುಳಿದವರಲ್ಲಿ ಹಲವರಿಗೆ ಎಂಜಿನ್‌ನ ಇಂಧನದಿಂದಾಗಿ ಸುಟ್ಟಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆಯೆಂದು ಅವರು ಹೇಳಿದ್ದಾರೆ.

 ಕಳೆದ ವಾರ 120 ವಲಸಿಗರಿದ್ದ ಡಿಂಗಿ ನೌಕೆಯೊಂದು ಲಿಬಿಯದ ಸಮುದ್ರಪ್ರದೇಶದಲ್ಲಿ ಮುಳುಗಿ ಕನಿಷ್ಠ 41 ವಲಸಿಗರು ಸಾವನ್ನಪ್ಪಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News