ಮ್ಯಾನ್ಮಾರ್‌ನಲ್ಲಿ ಸೇನಾಡಳಿತದ ವಿರುದ್ಧ ಪ್ರತಿಭಟನೆ ತೀವ್ರ

Update: 2021-03-07 17:24 GMT

ಯಾಂಗೊನ್.ಮಾ.7: ಮ್ಯಾನ್ಮಾರ್‌ನ ಸೇನಾಕ್ರಾಂತಿಯ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ಮುಂದುವರಿದಿದ್ದು, ಪುರಾತನ ರಾಜಧಾನಿ ಬಾಗನ್‌ನಲ್ಲಿ ರವಿವಾರ ಪ್ರತಿಭಟನಾಕಾರರ ಮೇಲೆ ಪೊಲೀಸರು ಗುಂಡುಹಾರಿಸಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ.

 ಮ್ಯಾನ್ಮಾರ್‌ನ ಹಲವಾರು ನಗರಗಳು ಹಾಗೂ ಪಟ್ಟಣಗಳಲ್ಲಿಯೂ ಪ್ರತಿಭಟನೆಗಳು ಕಾಡ್ಗಿಚ್ಚಿನಂತೆ ಹರಡುತ್ತಿದ್ದು ಪೊಲೀಸರು ಹಾಗ ಭದ್ರತಾಪಡೆಗಳು ಪ್ರತಿಭಟನಾಕಾರರನ್ನು ಹತ್ತಿಕ್ಕುವ ಕಾರ್ಯಾಚರಣೆ ಮುಂದುವರಿಸಿವೆ ಹಾಗೂ ಹಲವಾರು ಮಂದಿಯನ್ನು ಬಂಧಿಸಿವೆ. ಪೊಲೀಸರ ಗುಂಡೆಸೆತದಿಂದಾಗಿ ಫೆಬ್ರವರಿ 28ರಂದು ಕನಿಷ್ಠ 18 ಮಂದಿ ಹಾಗೂ ಬುಧವಾರದಂದು 38 ಮಂದಿ ಸಾವಿಗೀಡಾಗಿದ್ದಾರೆಂದು ವಿಶ್ವಸಂಸ್ಥೆಯ ಮಾನವಹಕ್ಕುಗಳ ಕಾರ್ಯಾಲಯವು ವರದಿ ಮಾಡಿದೆ. 1500ಕ್ಕೂ ಅಧಿಕ ಮಂದಿ ಪ್ರತಿಭಟನಾಕಾರರು ಹಾಗೂ ರಾಜಕೀಯ ಮುಖಂಡರನ್ನು ಪೊಲೀಸರು ಬಂಧಿಸಿದ್ದಾರೆಂದು ರಾಜಕೀಯ ಕೈದಿಗಳಿಗಾಗಿನ ಸ್ವತಂತ್ರ ನೆರವು ಸಂಘಟನೆಯು ತಿಳಿಸಿದೆ.

 ಮ್ಯಾನ್ಮಾರ್‌ನ ಬೃಹತ್ ನಗರಗಳಾದ ಯಾಂಗೊನ್ ಹಾಗೂ ಮಂಡಲಾಯ್‌ಗಳಲ್ಲಿ ರವಿವಾರ ಬೃಹತ್ ಪ್ರತಿಭಟನ ರ್ಯಾಲಿಗಳು ನಡೆದಿದ್ದು, ಜನರನ್ನು ಚದುರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದರು ಹಾಗೂ ಅಶ್ರುವಾಯು, ರಬ್ಬರ್‌ಬುಲೆಟ್ ಮತ್ತು ಸ್ಟನ್‌ಗ್ರೆನೇಡ್‌ಗಳನ್ನು ಪ್ರಯೋಗಿಸಿದರು.

ಯಾಂಗೊನ್‌ನಲ್ಲಿ ಪೊಲೀಸರು ಶನಿವಾರ ರಾತ್ರಿ ಪ್ರತಿಭಟನಾ ಚಳವಳಿಯ ಸಂಘಟಕರು ಹಾಗೂ ಬೆಂಬಲಿಗರ ನಿವಾಸಗಳ ಮೇಲೆ ದಾಳಿ ನಡೆಸಿರುವುದಾಗಿ ವರದಿಯಾಗಿದೆ.

  ಈ ಮಧ್ಯೆ ಯಾಂಗೊನ್ ನಲ್ಲಿ ಆಂಗ್ ಸಾನ್ ಸೂ ಕಿ ನೇತೃತ್ವದ ಎನ್‌ಎಲ್‌ಡಿಪಿ ಪಕ್ಷದ ವಾರ್ಡ್ ಮಟ್ಟದ ಅಧ್ಯಕ್ಷ ಖಿನ್ ಮೌಂಗ್ ಲಾಟ್ ಅವರು ಪೊಲೀಸರ ಚಿತ್ರಹಿಂಸೆಯಿಂದಾಗಿ ಮೃತಪಟ್ಟಿದ್ದಾರೆಂದು ಆರೋಪಿಸಲಾಗಿದೆ. ಪೊಲೀಸ್ ಕಸ್ಟಡಿಯಲ್ಲಿದ್ದ ಅವರನ್ನು ಗಂಭೀರ ಗಾಯಗಳೊಂದಿಗೆ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರವಿವಾರ ಅವರು ಕೊನೆಯುಸಿರೆಳೆದಿದ್ದಾರೆ.

 ದೇಶದ ವಿವಿಧ ನಗರಗಳಲ್ಲಿ ರಾತ್ರಿ ಕರ್ಫ್ಯೂ ಹೇರಲಾಗಿದ್ದು, ಪೊಲೀಸರು ಹಾಗೂ ಸೈನಿಕರು ಜಂಟಿಯಾಗಿ ದಾಳಿ ಕಾರ್ಯಾಚರಣೆ ನಡೆಸಿ ಪ್ರಜಾಪ್ರಭುತ್ವವಾದಿ ಚಳವಳಿಗಾರರನ್ನು ವಶಕ್ಕೆ ತೆಗೆದುಕೊಳ್ಳುತ್ತಿದ್ದಾರೆಂದು ವರದಿಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News