ಬಸ್ ಗಳ ಪೂರೈಕೆಯ ಗುತ್ತಿಗೆ ಪಡೆಯಲು ಭಾರತದಲ್ಲಿ 'ಲಂಚ ನೀಡಿದ್ದೇನೆಂದು' ಒಪ್ಪಿಕೊಂಡ ಸ್ವೀಡಿಷ್ ಕಂಪೆನಿ
ಸ್ಟಾಕ್ಹೋಮ್,ಮಾ.10: ಸ್ವೀಡನ್ನಿನ ಟ್ರಕ್ ಮತ್ತು ಬಸ್ ತಯಾರಿಕೆ ಕಂಪನಿ ಸ್ಕಾನಿಯಾ 2013-2016ರ ನಡುವಿನ ಅವಧಿಯಲ್ಲಿ ಭಾರತದ ಏಳು ರಾಜ್ಯಗಳಿಗೆ ಬಸ್ ಗಳ ಪೂರೈಕೆಯ ಗುತ್ತಿಗೆಯನ್ನು ಪಡೆದುಕೊಳ್ಳಲು ಲಂಚ ನೀಡಿತ್ತು ಎಂದು ಸ್ವೀಡಿಷ್ ಸುದ್ದಿ ವಾಹಿನಿ ಎಸ್ವಿಟಿ ಸೇರಿದಂತೆ ಮೂರು ಮಾಧ್ಯಮ ಸಂಸ್ಥೆಗಳು ನಡೆಸಿದ ತನಿಖೆಯು ಬಹಿರಂಗಗೊಳಿಸಿದೆ.
ಫಾಕ್ಸ್ ವ್ಯಾಗನ್ ಎಜಿಯ ವಾಣಿಜ್ಯ ವಾಹನಗಳ ಘಟಕ ಟ್ರಾಟನ್ ಎಸ್ಇ ಅಧೀನದ ಸ್ಕಾನಿಯಾ ಭಾರತದಲ್ಲಿ 2007ರಲ್ಲಿ ತನ್ನ ಕಾರ್ಯಾಚರಣೆಗಳನ್ನು ಆರಂಭಿಸಿತ್ತು ಮತ್ತು 2011ರಲ್ಲಿ ತಯಾರಿಕಾ ಘಟಕವನ್ನು ಸ್ಥಾಪಿಸಿತ್ತು.
ಮಾಧ್ಯಮ ಸಂಸ್ಥೆಗಳ ವರದಿಯ ಕುರಿತು ಪ್ರತಿಕ್ರಿಯೆಗಾಗಿ ಸುದ್ಧಿಸಂಸ್ಥೆಯು ಸಂಪರ್ಕಿಸಿದಾಗ,ಕಂಪನಿಯು 2017ರಲ್ಲಿ ಆರಂಭಿಸಿದ್ದ ತನಿಖೆಯಲ್ಲಿ ಹಿರಿಯ ಮ್ಯಾನೇಜ್ಮೆಂಟ್ ಅಧಿಕಾರಿಗಳು ಸೇರಿದಂತೆ ಸಿಬ್ಬಂದಿಗಳ ತಪ್ಪುಗಳು ಕಂಡುಬಂದಿವೆ. ಲಂಚಗಳನ್ನು ನೀಡಿದ್ದು ಮತ್ತು ತಪ್ಪು ಮಾಹಿತಿಗಳನ್ನು ಒದಗಿಸಿದ್ದು ಈ ಸಿಬ್ಬಂದಿಗಳ ದುರ್ನಡತೆಗಳಲ್ಲಿ ಸೇರಿವೆ. ಆಗಿನಿಂದ ಭಾರತೀಯ ಮಾರುಕಟ್ಟೆಯಲ್ಲಿ ಬಸ್‌ಗಳ ಮಾರಾಟವನ್ನು ಕಂಪನಿಯು ನಿಲ್ಲಿಸಿದೆ ಮತ್ತು ಫ್ಯಾಕ್ಟರಿಯನ್ನೂ ಮುಚ್ಚಲಾಗಿದೆ ಎಂದು ಸ್ಕಾನಿಯಾ ವಕ್ತಾರರು ತಿಳಿಸಿದರು.
ಅನಾಮಿಕ ಭಾರತೀಯ ಸಚಿವರೋರ್ವರಿಗೂ ಲಂಚವನ್ನು ಪಾವತಿಸಲಾಗಿದೆ ಎಂದು ತನಿಖಾ ವರದಿಯು ತಿಳಿಸಿದೆ.