6 ವರ್ಷಗಳಲ್ಲಿ ತೈವಾನ್ ವಶಪಡಿಸಿಕೊಳ್ಳಲಿರುವ ಚೀನಾ: ಅಮೆರಿಕದ ಉನ್ನತ ಸೇನಾಧಿಕಾರಿ ಎಚ್ಚರಿಕೆ

Update: 2021-03-10 18:16 GMT

ವಾಶಿಂಗ್ಟನ್, ಮಾ. 10: ಮುಂದಿನ ಆರು ವರ್ಷಗಳಲ್ಲಿ ಚೀನಾವು ತೈವಾನ್ ಮೇಲೆ ಆಕ್ರಮಣ ಮಾಡಬಹುದು ಎಂದು ಅಮೆರಿಕದ ಉನ್ನತ ಸೇನಾ ಕಮಾಂಡರ್ ಅಡ್ಮಿರಲ್ ಫಿಲಿಪ್ ಡೇವಿಡ್ಸನ್ ಮಂಗಳವಾರ ಹೇಳಿದ್ದಾರೆ.

ಏಶ್ಯದಲ್ಲಿನ ಅಮೆರಿಕದ ಸೇನಾ ಶಕ್ತಿಯನ್ನು ಮೀರಿಸಲು ಚೀನಾ ಸಿದ್ಧತೆಗಳನ್ನು ನಡೆಸುತ್ತಿರುವ ಹಿನ್ನೆಲೆಯಲ್ಲಿ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ಪ್ರಜಾಪ್ರಭುತ್ವ ಆಡಳಿತವಿರುವ ತೈವಾನ್ ಸರ್ವಾಧಿಕಾರಿ ಆಡಳಿತದ ಚೀನಾದಿಂದ ನಿರಂತರ ಬೆದರಿಕೆಯನ್ನು ಎದುರಿಸುತ್ತಿದೆ.

ತೈವಾನ್ ಚೀನಾದ ಭಾಗವಾಗಿದ್ದು, ಒಂದು ದಿನ ಅದನ್ನು ಬಲಪ್ರಯೋಗದಿಂದಲಾದರೂ ವಶಪಡಿಸಿಕೊಳ್ಳಲಾಗುತ್ತದೆ ಎಂಬ ನಿಲುವನ್ನು ಚೀನಾದ ನಾಯಕರು ಹೊಂದಿದ್ದಾರೆ.

‘‘2050ರ ವೇಳೆಗೆ ಏಶ್ಯಾದಲ್ಲಿನ ಅಮೆರಿಕದ ಸೇನಾ ಶಕ್ತಿಯನ್ನು ಮೀರಿಸಲು ಚೀನಾ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಅದಕ್ಕೆ ಪೂರ್ವಭಾವಿಯಾಗಿ ತೈವಾನನ್ನು ತನ್ನ ವಶಕ್ಕೆ ತೆಗೆದುಕೊಳ್ಳುವ ಮಹತ್ವಾಕಾಂಕ್ಷೆಯನ್ನು ಚೀನಾ ಹೊಂದಿದೆ. ಅದನ್ನು ಇದೇ ದಶಕದಲ್ಲಿ, ಅದರಲ್ಲೂ ಮುಂದಿನ ಆರು ವರ್ಷಗಳಲ್ಲಿ ನೆರವೇರಿಸುವ ಇಚ್ಛೆಯನ್ನು ಚೀನಾ ಹೊಂದಿದೆ’’ ಎಂದು ಅಮೆರಿಕದ ಸೆನೆಟ್ ಸಮಿತಿಯೊಂದರ ಸಮ್ಮುಖದಲ್ಲಿ ಹೇಳಿಕೆ ನೀಡಿದ ಏಶ್ಯಾ-ಪೆಸಿಫಿಕ್‌ನಲ್ಲಿ ಅಮೆರಿಕದ ಉನ್ನತ ಸೇನಾ ಅಧಿಕಾರಿಯಾಗಿರುವ ಅಡ್ಮಿರಲ್ ಫಿಲಿಪ್ ಡೇವಿಡ್ಸನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News