ಮ್ಯಾನ್ಮಾರ್: ಪ್ರತಿಭಟನಾಕಾರರ ಮೇಲೆ ಕಂಡಲ್ಲಿ ಗುಂಡು; 90ಕ್ಕೂ ಅಧಿಕ ಸಾವು

Update: 2021-03-27 15:55 GMT

ಯಾಂಗನ್ (ಮ್ಯಾನ್ಮಾರ್), ಮಾ. 27: ಮ್ಯಾನ್ಮಾರ್‌ನ ಆಡಳಿತವನ್ನು ಸೇನೆ ವಶಪಡಿಸಿಕೊಂಡಿರುವುದನ್ನು ಪ್ರತಿಭಟಿಸುತ್ತಿರುವ ಜನರ ಮೇಲೆ ದಾಳಿ ನಡೆಸಿರುವ ದೇಶದ ಸೇನೆಯು ಶನಿವಾರ 90ಕ್ಕೂ ಅಧಿಕ ಜನರನ್ನು ಕೊಂದಿದೆ.

ಫೆಬ್ರವರಿ 1ರಂದು ದೇಶದ ಆಡಳಿತವನ್ನು ವಹಿಸಿಕೊಂಡ ಬಳಿಕ ನಡೆದ ಅತಿ ದೊಡ್ಡ ರಕ್ತಪಾತಗಳಲ್ಲಿ ಇದು ಒಂದಾಗಿದೆ.

 ಭೀಕರ ರಕ್ತಪಾತವು ದೇಶದ ಸಶಸ್ತ್ರ ಪಡೆಗಳ ದಿನದಂದು ಸಂಭವಿಸಿದೆ. ಈ ಸಂದರ್ಭದಲ್ಲಿ ರಾಜಧಾನಿ ನೇಪಿಟಾವ್‌ನಲ್ಲಿ ನಡೆದ ಕವಾಯತಿನಲ್ಲಿ ಭಾಗವಹಿಸಿ ಮಾತನಾಡಿದ ಸೇನಾಡಳಿತದ ಮುಖ್ಯಸ್ಥ ಸೀನಿಯರ್ ಜನರಲ್ ಮಿನ್ ಆಂಗ್ ಹಲಯಂಗ್, ಸೇನೆಯು ಜನರನ್ನು ರಕ್ಷಿಸುವುದು ಹಾಗೂ ಪ್ರಜಾಪ್ರಭುತ್ವಕ್ಕಾಗಿ ಹೋರಾಡುವುದು ಎಂದರು.

ಜನರು ಪ್ರತಿಭಟನೆ ನಡೆಸಿದರೆ ಅವರ ತಲೆ ಮತ್ತು ಬೆನ್ನಿಗೆ ಗುಂಡು ಬೀಳುವ ಅಪಾಯವಿದೆ ಎಂಬುದಾಗಿ ಸರಕಾರಿ ಟೆಲಿವಿಶನ್ ಶುಕ್ರವಾರ ಎಚ್ಚರಿಸಿತ್ತು. ಇದರ ಹೊರತಾಗಿಯೂ ಸೇನಾ ಸರಕಾರವನ್ನು ವಿರೋಧಿಸಿ ಜನರು ಯಾಂಗನ್, ಮಾಂಡಲೇ ಮತ್ತು ಇತರ ನಗರಗಳ ಬೀದಿಗಳಲ್ಲಿ ಪ್ರತಿಭಟನೆ ನಡೆಸಿದರು.

ದೇಶಾದ್ಯಂತ ಭದ್ರತಾ ಪಡೆಗಳು 91 ಜನರನ್ನು ಗುಂಡು ಹಾರಿಸಿ ಕೊಂದಿವೆ ಎಂದು ‘ಮ್ಯಾನ್ಮಾರ್ ನೌ’ ಸುದ್ದಿ ವೆಬ್‌ಸೈಟ್ ವರದಿ ಮಾಡಿದೆ.

ಮಾಂಡಲೇಯಲ್ಲಿ ಕನಿಷ್ಠ 29 ಮಂದಿ ಮೃತಪಟ್ಟಿದ್ದು, ಮೃತಪಟ್ಟವರಲ್ಲಿ ಐದು ವರ್ಷದ ಒಂದು ಮಗುವೂ ಸೇರಿದೆ. ಯಾಂಗನ್‌ನಲ್ಲಿ ಕನಿಷ್ಠ 24 ಮಂದಿ ಮೃತಪಟ್ಟಿದ್ದಾರೆ ಎಂದು ‘ಮ್ಯಾನ್ಮಾರ್ ನೌ’ ಹೇಳಿದೆ.

ಇದರೊಂದಿಗೆ ಈವರೆಗೆ ಸೈನಿಕರ ಗುಂಡಿಗೆ ಬಲಿಯಾದ ನಾಗರಿಕರ ಸಂಖ್ಯೆ 400 ಮೀರಿದೆ.

ಸೈನಿಕರಿಗೆ ಅವಮಾನಕಾರಿ ದಿನ:  ‘‘ಇಂದು ಸಶಸ್ತ್ರ ಪಡೆಗಳಿಗೆ ಅತ್ಯಂತ ಅವಮಾನಕರ ದಿನವಾಗಿದೆ’’ ಎಂದು ಪದಚ್ಯುತ ಸಂಸದರು ಸ್ಥಾಪಿಸಿರುವ ಸೇನಾಡಳಿತ ವಿರೋಧಿ ಗುಂಪು ಸಿಆರ್‌ಪಿಎಚ್‌ನ ವಕ್ತಾರ ಡಾ. ಸಾಸ ಹೇಳಿದ್ದಾರೆ.

‘‘ಅವರು ನಮ್ಮನ್ನು ಹಕ್ಕಿಗಳು ಮತ್ತು ಕೋಳಿಗಳಂತೆ ಕೊಲ್ಲುತ್ತಿದ್ದಾರೆ. ನಮ್ಮ ಮನೆಗಳಿಗೆ ನುಗ್ಗಿಯೂ ಕೊಲ್ಲುತ್ತಿದ್ದಾರೆ’’ ಎಂದು ಮ್ಯಿಂಗ್‌ಯಾನ್ ಎಂಬ ಪಟ್ಟಣದ ನಿವಾಸಿಯೊಬ್ಬರು ಹೇಳಿದರು.

‘‘ಏನೇ ಆದರೂ ನಾವು ಪ್ರತಿಭಟನೆಯನ್ನು ಮುಂದುವರಿಸುತ್ತೇವೆ... ಸೇನಾ ಸರಕಾರ ಉರುಳುವವರೆಗೂ ನಾವು ಹೋರಾಡಬೇಕು’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News