ಭಾರತದ ಹತ್ತಿ, ಸಕ್ಕರೆ ಆಮದು ಪ್ರಸ್ತಾವ ತಿರಸ್ಕರಿಸಿದ ಪಾಕಿಸ್ತಾನ

Update: 2021-04-01 17:18 GMT

ಇಸ್ಲಾಮಾಬಾದ್ (ಪಾಕಿಸ್ತಾನ), ಎ. 1: ಭಾರತದಿಂದ ಹತ್ತಿ ಮತ್ತು ಸಕ್ಕರೆ ಆಮದು ಮಾಡಿಕೊಳ್ಳುವ ಪಾಕಿಸ್ತಾನದ ಆರ್ಥಿಕ ಸಮನ್ವಯ ಸಮಿತಿಯ ಪ್ರಸ್ತಾವವನ್ನು ದೇಶದ ಸಚಿವ ಸಂಪುಟ ಗುರುವಾರ ತಿರಸ್ಕರಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ‘ಜಿಯೋ ಟಿವಿ’ ವರದಿ ಮಾಡಿದೆ.

 ಪಾಕಿಸ್ತಾನದ ನೂತನ ಹಣಕಾಸು ಸಚಿವ ಹಮ್ಮಾದ್ ಅಝರ್ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ಸಮನ್ವಯ ಸಮಿತಿಯು, ಭಾರತದ ಹತ್ತಿ ಮತ್ತು ಸಕ್ಕರೆ ಆಮದಿನ ಮೇಲಿನ ಸುಮಾರು ಎರಡು ವರ್ಷಗಳ ನಿಷೇಧವನ್ನು ತೆರವುಗೊಳಿಸುವ ನಿರ್ಧಾರವನ್ನು ತೆಗೆದುಕೊಂಡಿತ್ತು. ಸಮಿತಿಯ ಈ ನಿರ್ಧಾರವನ್ನು ಹಣಕಾಸು ಸಚಿವರು ಬುಧವಾರ ಘೋಷಿಸಿದ್ದರು.

ಇದಾದ ಒಂದು ದಿನದ ಬಳಿಕ, ಅಂದರೆ ಗುರುವಾರ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯು ಸಮಿತಿಯ ನಿರ್ಧಾರವನ್ನು ತಿರಸ್ಕರಿಸಿತು.

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿರುವ ವಿಶೇಷ ಸ್ಥಾನಮಾನವನ್ನು 2019 ಆಗಸ್ಟ್ 5ರಂದು ಭಾರತ ಸರಕಾರ ಹಿಂದಕ್ಕೆ ಪಡೆದುಕೊಂಡ ಬಳಿಕ, ಪಾಕಿಸ್ತಾನವು ಭಾರತದೊಂದಿಗಿನ ದ್ವಿಪಕ್ಷೀಯ ವ್ಯಾಪಾರವನ್ನು ರದ್ದುಪಡಿಸಿತ್ತು.

ಭಾರತವು ಜಗತ್ತಿನ ಅತಿ ದೊಡ್ಡ ಹತ್ತಿ ಉತ್ಪಾದಕ ಹಾಗೂ ಎರಡನೇ ಅತಿ ದೊಡ್ಡ ಸಕ್ಕರೆ ಉತ್ಪಾದಕ ದೇಶವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News