ಎಚ್-1ಬಿ ವೀಸಾ ವಿತರಣೆ ಮೇಲಿನ ನಿಷೇಧ: ಮುಂದುವರಿಸದ ಬೈಡನ್ ಸರಕಾರ
ವಾಶಿಂಗ್ಟನ್, ಎ. 1: ಎಚ್-1ಬಿ ಸೇರಿದಂತೆ ವಿದೇಶೀಯರು ಬಳಸುವ ವಿವಿಧ ಉದ್ಯೋಗ ವೀಸಾಗಳ ವಿತರಣೆಯ ಮೇಲೆ ಹಿಂದಿನ ಡೊನಾಲ್ಡ್ ಟ್ರಂಪ್ ಸರಕಾರ ವಿಧಿಸಿದ್ದ ನಿಷೇಧ ಬುಧವಾರ ಕೊನೆಗೊಂಡಿದೆ ಹಾಗೂ ಪ್ರಸಕ್ತ ಬೈಡನ್ ಸರಕಾರವು ಅದನ್ನು ನವೀಕರಿಸಿಲ್ಲ.
ಸಾವಿರಾರು ಭಾರತೀಯ ಮಾಹಿತಿ ತಂತ್ರಜ್ಞಾನ ಉದ್ಯೋಗಿಗಳಿಗೆ ಇದು ವರದಾನವಾಗಿದೆ.
ಕೊರೋನ ವೈರಸ್ ಸಾಂಕ್ರಾಮಿಕ ತಂದ ಸಂಕಷ್ಟದ ಹಿನ್ನೆಲೆಯಲ್ಲಿ, ಕಳೆದ ವರ್ಷದ ಜೂನ್‌ನಲ್ಲಿ ದೇಶವ್ಯಾಪಿ ಲಾಕ್‌ಡೌನ್ ಜಾರಿಯಲ್ಲಿದ್ದಾಗ, ಅಂದಿನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದಕ್ಕೆ ಸಂಬಂಧಿಸಿದ ಆದೇಶವನ್ನು ಹೊರಡಿಸಿದ್ದರು. ಕೊರೋನ ವೈರಸ್ ಕಾರಣದಿಂದಾಗಿ ಅಮೆರಿಕದಲ್ಲಿ ಉದ್ಯೋಗಾವಕಾಶಗಳು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ, ಅಮೆರಿಕನ್ನರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ಲಭಿಸುವಂತೆ ನೋಡಿಕೊಳ್ಳುವುದಕ್ಕಾಗಿ ಈ ಆದೇಶವನ್ನು ಹೊರಡಿಸಲಾಗಿತ್ತು.
ಕಳೆದ ವರ್ಷದ ಡಿಸೆಂಬರ್ 31ರಂದು ಟ್ರಂಪ್ ಈ ಆದೇಶವನ್ನು 2021 ಮಾರ್ಚ್ 31ರವರೆಗೆ ವಿಸ್ತರಿಸಿದ್ದರು.
ಆದೇಶವು ಮಾರ್ಚ್ 31ರಂದು ಮುಕ್ತಾಯಗೊಂಡಿದೆ. ನೂತನ ಅಧ್ಯಕ್ಷ ಜೋ ಬೈಡನ್ ಅದನ್ನು ವಿಸ್ತರಿಸಿಲ್ಲ.
ಟ್ರಂಪ್‌ರ ವಲಸೆ ನೀತಿಗಳು ಕ್ರೂರವಾಗಿವೆ ಎಂದು ಚುನಾವಣಾ ಪ್ರಚಾರದ ವೇಳೆ ಹೇಳಿದ್ದ ಬೈಡನ್, ಎಚ್-1ಬಿ ವೀಸಾಗಳ ವಿತರಣೆಯ ಮೇಲೆ ವಿಧಿಸಲಾಗಿದ್ದ ನಿಷೇಧವನ್ನು ತೆರವುಗೊಳಿಸುವ ಭರವಸೆ ನೀಡಿದ್ದರು.