ಪಶ್ಚಿಮ ದಂಡೆಯನ್ನು ಇಸ್ರೇಲ್ ‘ಅತಿಕ್ರಮಿಸಿರುವುದು’ ಸತ್ಯ: ಅಮೆರಿಕ
ವಾಶಿಂಗ್ಟನ್, ಎ. 1: ಫೆಲೆಸ್ತೀನ್‌ಗೆ ಸೇರಿದ ಪಶ್ಚಿಮ ದಂಡೆಯ ನಿಯಂತ್ರಣವನ್ನು ಇಸ್ರೇಲ್ ಹೊಂದುವುದು ನಿಜವಾಗಿಯೂ ‘ಅತಿಕ್ರಮಣ’ವಾಗಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಸರಕಾರ ಬುಧವಾರ ಹೇಳಿದೆ.
ಇತ್ತೀಚೆಗೆ ಬಿಡುಗಡೆಯಾಗಿರುವ ವರದಿಯೊಂದಕ್ಕೆ ಸಂಬಂಧಿಸಿ ಅದು ಈ ಸ್ಪಷ್ಟೀಕರಣ ನೀಡಿದೆ. ಆ ವರದಿಯನ್ನು ಹಿಂದಿನ ಡೊನಾಲ್ಡ್ ಟ್ರಂಪ್ ಸರಕಾರದ ಭಾಷೆಯಲ್ಲೇ ತಯಾರಿಸಲಾಗಿದ್ದು, ‘ಅತಿಕ್ರಮಣ’ ಪದಕ್ಕೆ ತಿಲಾಂಜಲಿ ಕೊಟ್ಟಿರುವಂತೆ ಕಂಡುಬಂದಿತ್ತು.
‘‘ವಿದೇಶಾಂಗ ಇಲಾಖೆಯ ಮಾನವಹಕ್ಕುಗಳ ಕುರಿತ ವಾರ್ಷಿಕ ವರದಿಯು, ಪಶ್ಚಿಮ ದಂಡೆಯಲ್ಲಿ ಪ್ರಸಕ್ತ ನೆಲೆಸಿರುವ ಪರಿಸ್ಥಿತಿಯನ್ನು ಬಣ್ಣಿಸಲು ‘ಅತಿಕ್ರಮಣ’ ಪದವನ್ನೇ ಬಳಸುವುದು’’ ಎಂದು ವಿದೇಶಾಂಗ ಇಲಾಖೆಯ ವಕ್ತಾರ ನೆಡ್ ಪ್ರೈಸ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
‘‘ಇದು ಹಲವು ದಶಕಗಳಿಂದಲೂ ಅಮೆರಿಕದ ಉಭಯ ಪಕ್ಷಗಳ ಸರಕಾರಗಳ ದೀರ್ಘಕಾಲೀನ ನಿಲುವಾಗಿದೆ’’ ಎಂದು ಅವರು ನುಡಿದರು.
ಆದರೆ, ಕಟ್ಟಾ ಇಸ್ರೇಲ್ ಪರ ನಿಲುವಿನ ಟ್ರಂಪ್ ಅಡಿಯಲ್ಲಿ, ವಾರ್ಷಿಕ ಮಾನವಹಕ್ಕುಗಳ ವರದಿಯಲ್ಲಿ ‘ಇಸ್ರೇಲ್ ಮತ್ತು ಆಕ್ರಮಿತ ಭೂಪ್ರದೇಶಗಳು’ ಎಂಬ ವಿಭಾಗನ್ನು ‘ಇಸ್ರೇಲ್, ಪಶ್ಚಿಮ ದಂಡೆ ಮತ್ತು ಗಾಝಾ’ ಎಂಬುದಾಗಿ ಬದಲಾಯಿಸಲಾಗಿತ್ತು.
ಬೈಡನ್ ಆಡಳಿತದಡಿ ಮಂಗಳವಾರ ಬಿಡುಗಡೆ ಮಾಡಲಾದ ಮೊದಲ ಇಂಥ ವರದಿಯಲ್ಲಿ ಇದೇ ಮಾದರಿಯನ್ನು ಉಳಿಸಿಕೊಳ್ಳಲಾಗಿದೆ. ಆದರೆ, ಇದು ಯಾವುದೇ ನಿಲುವನ್ನು ವ್ಯಕ್ತಪಡಿಸುವುದಿಲ್ಲ ಎಂದು ವರದಿ ಹೇಳಿದೆ.
ವರದಿಯು ಸಾಮಾನ್ಯವಾಗಿ ಭೌಗೋಳಿಕ ಹೆಸರುಗಳನ್ನು ಬಳಸುತ್ತದೆ ಹಾಗೂ ‘ಇಸ್ರೇಲ್, ಪಶ್ಚಿಮ ದಂಡೆ ಮತ್ತು ಗಾಝಾ’ ಓದುಗರಿಗೆ ಸ್ಪಷ್ಟವಾಗಿ ಗೊತ್ತಾಗುತ್ತದೆ ಹಾಗೂ ಅರ್ಥ ಮಾಡಿಕೊಳ್ಳಲು ಸುಲಭವಾಗಿದೆ ಎಂದು ವಿದೇಶಾಂಗ ಇಲಾಖೆಯ ಉನ್ನತ ಅಧಿಕಾರಿ ಲೀಸಾ ಪೀಟರ್‌ಸನ್ ಹೇಳಿದ್ದಾರೆ.