ಇರಾಕ್: ಅಮೆರಿಕ ಯೋಧರಿದ್ದ ಸೇನಾ ನೆಲೆ ಮೇಲೆ ರಾಕೆಟ್ ದಾಳಿ

Update: 2021-04-04 18:29 GMT
ಪೋಟೊ ಕೃಪೆ: //twitter.com/

ಬಾಗ್ದಾದ್,ಎ.4: ಇರಾಕ್ ರಾಜಧಾನಿತ ಬಾಗ್ದಾದ್ ನಲ್ಲಿ ಅಮೆರಿಕ ಸೈನಿಕರಿರುವ ಇರಾಕಿ ಸೇನಾನೆಲೆಯೊಂದರ ಸಮೀಪ ರವಿವಾರ ಎರಡು ರಾಕೆಟ್ ಗಳು ಅಪ್ಪಳಿಸಿವೆ. ಇರಾಕ್ ಪ್ರಧಾನಿ ಮುಸ್ತಫಾ ಅಲ್-ಖದೇಮಿ ಜೊತೆ ವಾಶಿಂಗ್ಟನ್ ನೂತನ ವ್ಯವಹಾರಾತ್ಮಕ ಮಾತುಕತೆಯನ್ನು ನಡೆಸಲು ಮೂರು ದಿನಗಳಿರುವಂತೆಯೇ ಈ ದಾಳಿ ನಡೆದಿದೆ. 

ಇರಾಕ್‌ ನ ಬಲಾದ್ ವಾಯುನೆಲೆಯ ಮೇಲೆ ನಡೆದ ಈ ರಾಕೆಟ್ ದಾಳಿಯಲ್ಲಿ ಯಾವುದೇ ಸಾವುನೋವು ಸಂಭವಿಸಿಲ್ಲವೆಂದು ಭದ್ರತಾ ಮೂಲಗಳು ತಿಳಿಸಿವೆ. ದಾಳಿಯ ಹೊಣೆಯನ್ನು ಈವರೆಗೆ ಯಾವುದೇ ಗುಂಪು ವಹಿಸಿಕೊಂಡಿಲ್ಲ. ಆದರೆ ಇರಾಕ್ ನಲ್ಲಿ ನಿಯೋಜಿತರಾದ ಅಮೆರಿಕ ಸೇನಾಪಡೆಗಳು ಹಾಗೂ ರಾಜತಾಂತ್ರಿಕರ ಮೇಲೆ ದಾಳಿ ನಡೆಸುತ್ತಿರುವ ಉಗ್ರರಿಗೆ ಇರಾನ್ ಬೆಂಬಲ ನೀಡುತ್ತಿರುವುದಾಗಿ ಅಮೆರಿಕ ಆಪಾದಿಸಿದೆ.
 
ಅಮೆರಿಕದ ನೂತನ ಅಧ್ಯಕ್ಷರಾಗಿ ಜೋ ಬೈಡೆನ್ ಜನವರಿಯಲ್ಲಿ ಅಧಿಕಾರಕ್ಕೇರಿದ ಬಳಿಕ ಇರಾಕ್ ನಲ್ಲಿ ಅಮೆರಿಕನ್ ಪಡೆಗಳು, ರಾಯಭಾರಿ ಕಚೇರಿ ಸೇರಿದಂತೆ ಅಮೆರಿಕದ ಹಿತಾಸಕ್ತಿಗಳ ಮೇಲೆ ನಡೆದ 14ನೇ ದಾಳಿ ಇದಾಗಿದೆ.
 
ಈ ದಾಳಿಗಳಲ್ಲಿ ಒಟ್ಟಾರೆ ಇಬ್ಬರು ಅಮೆರಿಕನ್ನರು ಹಾಗೂ ಓರ್ವ ಇರಾಕಿ ನಾಗರಿಕ ಸಾವನ್ನಪ್ಪಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News