ಇಂಡೋನೇಶ್ಯ, ಈಸ್ಟ್ ಟೈಮರ್ ಪ್ರವಾಹ: 87 ಸಾವು

Update: 2021-04-05 18:10 GMT
photo ://twitter.com/kuwaittimesnews

ಜಕಾರ್ತ (ಇಂಡೋನೇಶ್ಯ), ಎ. 4: ಇಂಡೋನೇಶ್ಯ ಮತ್ತು ಪಕ್ಕದ ಈಸ್ಟ್ ಟೈಮರ್ ದೇಶಗಳಲ್ಲಿ ದಿಢೀರ್ ಪ್ರವಾಹ ಮತ್ತು ಭೂಕುಸಿತಗಳು ಸಂಭವಿಸಿದ ಬಳಿಕ ಕನಿಷ್ಠ 87 ಮಂದಿ ಮೃತಪಟ್ಟಿದ್ದಾರೆ ಹಾಗೂ ಹಲವಾರು ಮಂದಿ ಈಗಲೂ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಎಡೆಬಿಡದೆ ಸುರಿದ ಜಡಿಮಳೆಯು ಜಲಪ್ರಳಯಕ್ಕೆ ಕಾರಣವಾಯಿತು. ಇದರ ಪರಿಣಾಮವಾಗಿ ಭೂಕುಸಿತಗಳು ಸಂಭವಿಸಿದವು ಹಾಗೂ ಮರಗಳು ಉರುಳಿದವು. ಹಾಗಾಗಿ, ಜನವಸತಿ ಪ್ರದೇಶಗಳು ಕೆಸರಿನ ಗುಪ್ಪೆಗಳಾಗಿ ಪರಿವರ್ತನೆಯಾದವು. ಸಾವಿರಾರು ಮಂದಿ ಸುರಕ್ಷಿತರ ಪ್ರದೇಶಗಳಿಗೆ ಧಾವಿಸಿದ್ದಾರೆ.

ಈಗಾಗಲೇ ಪ್ರವಾಹ ಮತ್ತು ಭೂಕುಸಿತಗಳಿಂದ ಜರ್ಝರಿತಗೊಂಡಿರುವ ಪ್ರದೇಶಗಳ ಮೇಲೆ ಸೋಮವಾರ ಬಿರುಗಾಳಿ ಅಪ್ಪಳಿಸಿತು. ಇದರಿಂದಾಗಿ ಅವಶೇಷಗಳ ಅಡಿಯಲ್ಲಿ ಸಿಕ್ಕಿಹಾಕಿಕೊಂಡಿರುವವರನ್ನು ಹೊರತೆಗೆಯುವ ಕಾರ್ಯಾಚರಣೆಗೆ ತೊಂದರೆಯಾಗಿದೆ.

ಈವರೆಗೆ ಇಂಡೋನೇಶ್ಯದಲ್ಲಿ 66 ಮಂದಿ ಮೃತಪಟ್ಟಿದ್ದಾರೆ ಎಂದು ದೇಶದ ವಿಪತ್ತು ನಿರ್ವಹಣಾ ಸಂಸ್ಥೆ ತಿಳಿಸಿದೆ. ಈಸ್ಟ್ ಟೈಮರ್‌ನಲ್ಲಿ 21 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ.

 ಈಸ್ಟ್ ಟೈಮರ್ ಇಂಡೋನೇಶ್ಯ ಮತ್ತು ಆಸ್ಟ್ರೇಲಿಯ ನಡುವಿನ ದ್ವೀಪರಾಷ್ಟ್ರವಾಗಿದೆ. ಅರ್ಧ ದ್ವೀಪವನ್ನು ಈಸ್ಟ್ ಟೈಮರ್ ವ್ಯಾಪಿಸಿದ್ದು, ಅದರ ಜನಸಂಖ್ಯೆ ಸುಮಾರು 13 ಲಕ್ಷ. ಈಸ್ಟ್ ಟೈಮರ್‌ನ ಜಲಾವೃತ ರಾಜಧಾನಿ ಡಿಲಿಯಲ್ಲಿ ಹೆಚ್ಚಿನ ಸಾವುಗಳು ಸಂಭವಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News