ಟರ್ಕಿ: 10 ನಿವೃತ್ತ ನೌಕಾಪಡೆ ಅಧಿಕಾರಿಗಳ ಬಂಧನ

Update: 2021-04-05 18:15 GMT

ಅಂಕಾರ (ಟರ್ಕಿ), ಎ. 5: ಸರಕಾರದ ಅಧಿಕಾರಿಗಳು ಟರ್ಕಿಯ ಸೇನಾ ಕ್ಷಿಪ್ರಕ್ರಾಂತಿಯ ಇತಿಹಾಸಕ್ಕೆ ಜೋತುಬಿದ್ದಿದ್ದಾರೆ ಎಂಬ ಹೇಳಿಕೆಯೊಂದನ್ನು 100ಕ್ಕೂ ಅಧಿಕ ನಿವೃತ್ತ ಹಿರಿಯ ನೌಕಾಪಡೆ ಅಧಿಕಾರಿಗಳು ಬಿಡುಗಡೆಗೊಳಿಸಿದ ಬಳಿಕ, ಅಧಿಕಾರಿಗಳು ಸೋಮವಾರ 10 ಮಾಜಿ ಅಡ್ಮಿರಲ್ (ನೌಕಾಪಡೆ ಮುಖ್ಯಸ್ಥರು)ಗಳನ್ನು ಬಂಧಿಸಿದ್ದಾರೆ.

ನಿವೃತ್ತ ಅಡ್ಮಿರಲ್‌ಗಳು ಬರೆದ ಬಹಿರಂಗ ಪತ್ರದ ಬಗ್ಗೆ ತನಿಖೆಯೊಂದನ್ನು ನಡೆಸಲಾಗುತ್ತಿದ್ದು, ಅದರ ಭಾಗವಾಗಿ ಮಾಜಿ ಸೇನಾಧಿಕಾರಿಗಳನ್ನು ಬಂಧಿಸಲಾಗಿದೆ ಎಂದು ಸರಕಾರಿ ಒಡೆತನದ ಸುದ್ದಿ ಸಂಸ್ಥೆ ಅನಡೊಲು ಹೇಳಿದೆ.

ರಾಜಧಾನಿ ಅಂಕಾರದಲ್ಲಿರುವ ಮುಖ್ಯ ಪ್ರಾಸಿಕ್ಯೂಟರ್ ಬಹಿರಂಗ ಪತ್ರದ ಬಗ್ಗೆ ತನಿಖೆ ಮಾಡುತ್ತಿದ್ದಾರೆ.

ಅದೂ ಅಲ್ಲದೆ, ಮೂರು ದಿನಗಳಲ್ಲಿ ಅಂಕಾರ ಪೊಲೀಸರ ಎದುರು ಹಾಜರಾಗುವಂತೆ ಇನ್ನೂ ನಾಲ್ವರು ನಿವೃತ್ತ ನೌಕಾಪಡೆ ಅಧಿಕಾರಿಗಳಿಗೆ ಪ್ರಾಸಿಕ್ಯೂಟರ್‌ಗಳು ನೋಟಿಸ್ ನೀಡಿದ್ದಾರೆ. ಅವರ ಪ್ರಾಯವನ್ನು ಪರಿಗಣಿಸಿ ಅವರನ್ನು ಬಂಧಿಸದಿರುವ ನಿರ್ಧಾರವನ್ನು ಅಧಿಕಾರಿಗಳು ತೆಗೆದುಕೊಂಡಿದ್ದಾರೆ.

‘‘ಸಾಂವಿಧಾನಿಕ ವ್ಯವಸ್ಥೆಯನ್ನು ತೆಗೆದುಹಾಕುವುದಕ್ಕಾಗಿ ಬಲ ಮತ್ತು ಹಿಂಸೆ ಪ್ರಯೋಗಿಸಿದ’’ ಆರೋಪವನ್ನು ಮಾಜಿ ಸೇನಾಧಿಕಾರಿಗಳ ವಿರುದ್ಧ ಹೊರಿಸಲಾಗಿದೆ ಎಂದು ಎನ್‌ಡಿ ಟಿವಿ ಸುದ್ದಿವಾಹಿನಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News