ವಿಶ್ವಸಂಸ್ಥೆಯಲ್ಲಿ ಮ್ಯಾನ್ಮಾರ್ ಹಿಂಸಾಚಾರವನ್ನು ಖಂಡಿಸಿದ ಭಾರತ

Update: 2021-04-11 17:59 GMT

ವಿಶ್ವಸಂಸ್ಥೆ, ಎ. 11: ಮ್ಯಾನ್ಮಾರ್ ಆಡಳಿತವನ್ನು ಕ್ಷಿಪ್ರಕ್ರಾಂತಿಯ ಮೂಲಕ ಸೇನೆ ವಶಪಡಿಸಿಕೊಂಡ ಬಳಿಕ, ಆ ದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಭಾರತ ಖಂಡಿಸಿದೆ ಹಾಗೂ ‘ಸಂಯಮ’ವನ್ನು ವಹಿಸುವಂತೆ ಅದು ಸಂಬಂಧಪಟ್ಟ ಎಲ್ಲ ಪಕ್ಷಗಳಿಗೆ ಕರೆ ನೀಡಿದೆ.

ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಶನಿವಾರ ನಡೆದ ಮ್ಯಾನ್ಮಾರ್ ಕುರಿತ ಭದ್ರತಾ ಮಂಡಳಿ ಸಭೆಯಲ್ಲಿ ಮಾತನಾಡಿದ ವಿಶ್ವಸಂಸ್ಥೆಯಲ್ಲಿ ಭಾರತದ ಉಪ ಖಾಯಂ ಪ್ರತಿನಿಧಿ ನಾಗರಾಜ್ ನಾಯ್ಡು, ‘‘ಮ್ಯಾನ್ಮಾರ್‌ನಲ್ಲಿ ಹಿಂಸೆಯ ಬಳಕೆಯನ್ನು ಭಾರತ ಖಂಡಿಸುತ್ತದೆ ಹಾಗೂ ನಾಗರಿಕರ ಸಾವಿಗೆ ಸಂತಾಪ ಸೂಚಿಸುತ್ತದೆ’’ ಎಂದರು. ‘‘ಗರಿಷ್ಠ ಸಂಯಮವನ್ನು ಕಾಪಾಡಿಕೊಳ್ಳುವುದು ಅಗತ್ಯವಾಗಿದೆ. ಮಾನವೀಯ ತತ್ವಗಳನ್ನು ಎತ್ತಿಹಿಡಿಯುವುದು ಅತ್ಯಂತ ಅಗತ್ಯವಾಗಿದೆ’’ ಎಂದರು.

ಪ್ರಜಾಪ್ರಭುತ್ವ ಮತ್ತು ಕಾನೂನಿನ ಆಡಳಿತದ ಮಹತ್ವಕ್ಕೆ ನಾಯ್ಡು ಒತ್ತು ನೀಡಿದರು.

700 ಮೀರಿದ ಸಾವಿನ ಸಂಖ್ಯೆ

ಮ್ಯಾನ್ಮಾರ್‌ನ ಬಗೊ ನಗರದಲ್ಲಿ ಭದ್ರತಾ ಪಡೆಗಳು ಶನಿವಾರ ಕ್ಷಿಪ್ರಕ್ರಾಂತಿ ವಿರೋಧಿ ಪ್ರತಿಭಟನಕಾರರ ಮೇಲೆ ಗುಂಡು ಹಾರಿಸಿದಾಗ 82 ಮಂದಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

 ಇದರೊಂದಿಗೆ ಕ್ಷಿಪ್ರಕ್ರಾಂತಿಯ ಬಳಿಕ ನಡೆದ ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 700ನ್ನು ದಾಟಿದೆ.

ಬಗೊ ನಗರದಲ್ಲಿ ಭದ್ರತಾ ಪಡೆಗಳು ನಡೆಸಿದ ಗೋಲಿಬಾರಿನಲ್ಲಿ ಗಾಯಗೊಂಡವರಿಗೆ ಚಿಕಿತ್ಸೆ ನಿರಾಕರಿಸಿರುವುದು ತನ್ನ ಗಮನಕ್ಕೆ ಬಂದಿದೆ ಎಂದು ಮ್ಯಾನ್ಮಾರ್‌ನಲ್ಲಿರುವ ವಿಶ್ವಸಂಸ್ಥೆ ಕಚೇರಿ ಹೇಳಿದೆ.

ಭಾರೀ ರಕ್ತಪಾತದ ಹೊರತಾಗಿಯೂ ಸೇನಾಡಳಿತದ ವಿರುದ್ಧದ ಪ್ರತಿಭಟನೆಗಳು ದೇಶಾದ್ಯಂತ ಮುಂದುವರಿದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News