ಅಮೆರಿಕ: ಪೊಲೀಸ್ ಗುಂಡಿಗೆ 16 ವರ್ಷದ ಕರಿಯ ತರುಣಿ ಬಲಿ

Update: 2021-04-21 17:27 GMT

ವಾಶಿಂಗ್ಟನ್, ಎ. 21: ಜಾರ್ಜ್ ಫ್ಲಾಯ್ಡಾರನ್ನು ಕೊಂದ ಪೊಲೀಸ್ ಅಧಿಕಾರಿ ದೋಷಿ ಎಂಬುದಾಗಿ ನ್ಯಾಯಾಲಯವೊಂದು ತೀರ್ಪು ನೀಡುತ್ತಿರುವಂತೆಯೇ, ಅಮೆರಿಕದ ಓಹಿಯೊ ರಾಜ್ಯದಲ್ಲಿ ಪೊಲೀಸರು ಮಂಗಳವಾರ ಕರಿಯ ಹದಿಹರಯದ ತರುಣಿಯೊಬ್ಬರನ್ನು ಗುಂಡು ಹಾರಿಸಿ ಕೊಂದಿದ್ದಾರೆ.

16 ವರ್ಷದ ತರುಣಿ ಮ’ಖಿಯ ಬ್ರಯಂಟ್ ಚೂರಿಯಂತೆ ಕಂಡುಬರುವ ವಸ್ತುವೊಂದನ್ನು ಹಿಡಿದುಕೊಂಡು ಇನ್ನೋರ್ವ ವ್ಯಕ್ತಿಯ ಕಡೆಗೆ ಜಿಗಿಯುವುದನ್ನು ಪೊಲೀಸರ ಬಾಡಿ ಕ್ಯಾಮರ ತೋರಿಸುತ್ತದೆ.

ಕೊಲಂಬಸ್ ನಗರದಲ್ಲಿ ವ್ಯಕ್ತಿಯೊಬ್ಬರ ತುರ್ತು ಕರೆಗೆ ಸ್ಪಂದಿಸಿ ಮಂಗಳವಾರ ಸಂಜೆ ಸುಮಾರು 4:30ರ ಸುಮಾರಿಗೆ ಪೊಲೀಸರು ಧಾವಿಸಿದಾಗ ಈ ಘಟನೆ ಸಂಭವಿಸಿದೆ ಎಂದು ನಗರ ಪೊಲೀಸ್ ಮುಖ್ಯಸ್ಥ ಮೈಕಲ್ ವುಡ್ಸ್ ಹೇಳಿದ್ದಾರೆ.

‘‘ನಮ್ಮ ನಗರದ ಇನ್ನೋರ್ವ ತರುಣಿಯನ್ನು ರಕ್ಷಿಸುವುದಕ್ಕಾಗಿ ಪೊಲೀಸರು ಈ ಕ್ರಮ ತೆಗೆದುಕೊಂಡರು’’ ಎಂದು ಕೊಲಂಬಸ್ ನಗರದ ಮೇಯರ್ ಆ್ಯಂಡ್ರೂ ಗಿಂತರ್ ಹೇಳಿದ್ದಾರೆ.

ಜನಾಂಗೀಯ ತಾರತಮ್ಯ ‘‘ನಮ್ಮ ದೇಶದ ಆತ್ಮಕ್ಕೆ ಅಂಟಿರುವ ಕಳಂಕ’’: ಬೈಡನ್

ವಾಶಿಂಗ್ಟನ್, ಎ. 21: ವ್ಯವಸ್ಥೆಯಲ್ಲಿ ಬೇರೂರಿರುವ ಜನಾಂಗೀಯ ತಾರತಮ್ಯವು ‘‘ನಮ್ಮ ದೇಶದ ಆತ್ಮಕ್ಕೆ ಅಂಟಿರುವ ಕಳಂಕ’’ವಾಗಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಮಂಗಳವಾರ ಹೇಳಿದ್ದಾರೆ.

ಜಾರ್ಜ್ ಫ್ಲಾಯ್ಡಾ ಹತ್ಯೆ ಪ್ರಕರಣದಲ್ಲಿ ಮಾಜಿ ಪೊಲೀಸ್ ಅಧಿಕಾರಿ ಡೆರೆಕ್ ಶಾವಿನ್ ದೋಷಿ ಎಂಬುದಾಗಿ ಮಿನಿಯಪೊಲಿಸ್ ನ್ಯಾಯಾಲಯವೊಂದು ತೀರ್ಪು ನೀಡಿದ ಬಳಿಕ ಟೆಲಿವಿಶನ್‌ನಲ್ಲಿ ದೇಶವನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

 ‘‘ನಮ್ಮ ಪೊಲೀಸ್ ವ್ಯವಸ್ಥೆ ಮತ್ತು ಕ್ರಿಮಿನಲ್ ನ್ಯಾಯ ವ್ಯವಸ್ಥೆಯಲ್ಲಿರುವ ಜನಾಂಗೀಯ ತಾರತಮ್ಯ ಮತ್ತು ಜನಾಂಗೀಯ ಅಸಮಾನತೆಯ ವಿರುದ್ಧ ನಾವು ಎದೆಕೊಟ್ಟು ಹೋರಾಡಬೇಕಾಗಿದೆ’’ ಎಂದು ಬೈಡನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News