ನವಾಲ್ನಿ ಸ್ಥಿತಿ ಗಂಭೀರ: ಚಿಕಿತ್ಸೆಗಾಗಿ ರಶ್ಯದಿಂದ ಹೊರ ಸಾಗಿಸಲು ವಿಶ್ವಸಂಸ್ಥೆ ತಜ್ಞರ ಕರೆ

Update: 2021-04-22 18:27 GMT

ಜಿನೀವ (ಸ್ವಿಟ್ಸರ್ಲ್ಯಾಂಡ್), ಎ. 22: ಜೈಲಿನಲ್ಲಿರುವ ರಶ್ಯದ ಪ್ರತಿಪಕ್ಷ ನಾಯಕ ಅಲೆಕ್ಸಿ ನವಾಲ್ನಿಯ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ ಎಂಬುದಾಗಿ ವಿಶ್ವಸಂಸ್ಥೆಯ ಮಾನವಹಕ್ಕುಗಳ ತಜ್ಞರು ಬುಧವಾರ ಎಚ್ಚರಿಸಿದ್ದಾರೆ ಹಾಗೂ ಅವರನ್ನು ಚಿಕಿತ್ಸೆಗಾಗಿ ರಶ್ಯದಿಂದ ತುರ್ತಾಗಿ ಹೊರಗೆ ಸಾಗಿಸಬೇಕು ಎಂದು ಕರೆ ನೀಡಿದ್ದಾರೆ.

‘‘ನವಾಲ್ನಿಯ ಜೀವ ಗಂಭೀರ ಅಪಾಯದಲ್ಲಿದೆ ಎಂದು ನಾವು ಭಾವಿಸಿದ್ದೇವೆ’’ ಎಂದು ವಿಶ್ವಸಂಸ್ಥೆಯ ನಾಲ್ವರು ಸ್ವತಂತ್ರ ತಜ್ಞರು ಎಚ್ಚರಿಸಿದ್ದಾರೆ.

ವಿದೇಶದಲ್ಲಿ ತುರ್ತು ವೈದ್ಯಕೀಯ ಚಿಕಿತ್ಸೆಗಾಗಿ ಅವರನ್ನು ಹೊರಗೆ ಸಾಗಿಸಲು ಅನುಮತಿ ನೀಡುವಂತೆ ಅವರು ರಶ್ಯದ ಅಧಿಕಾರಿಗಳಿಗೆ ಕರೆ ನೀಡಿದ್ದಾರೆ. ‘‘ನವಾಲ್ನಿ ರಶ್ಯದ ಬಂಧನದಲ್ಲಿರುವಾಗ ಅವರ ಜೀವ ಮತ್ತು ಆರೋಗ್ಯಕ್ಕೆ ರಶ್ಯ ಸರಕಾರವೇ ಉತ್ತರದಾಯಿಯಾಗುತ್ತದೆ’’ ಎಂದು ಅವರು ಹೇಳಿದ್ದಾರೆ.

ನವಾಲ್ನಿ ಕಠಿಣ ಪರಿಸ್ಥಿತಿಯಲ್ಲಿ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ. ಅವರಿಗೆ ಸರಿಯಾದ ವೈದ್ಯಕೀಯ ಆರೈಕೆಯನ್ನು ನೀಡಲಾಗುತ್ತಿಲ್ಲ. ತನ್ನ ಆಯ್ಕೆಯ ವೈದ್ಯರನ್ನು ನೋಡುವ ಅವಕಾಶವನ್ನು ಅವರಿಗೆ ನಿರಾಕರಿಸಲಾಗಿದೆ. ತನಗೆ ಸರಿಯಾದ ವೈದ್ಯಕೀಯ ಚಿಕಿತ್ಸೆ ನೀಡಬೇಕೆಂದು ಆಗ್ರಹಿಸಿ ಅವರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

ನವಾಲ್ನಿ ಬೆಂಬಲಿಸಿ ಬೃಹತ್ ಪ್ರತಿಭಟನೆ

► 1,700ಕ್ಕೂ ಅಧಿಕ ಮಂದಿ ಬಂಧನ

ಮಾಸ್ಕೋ (ರಶ್ಯ), ಎ. 22: ಜೈಲಿನಲ್ಲಿರುವ ರಶ್ಯದ ಪ್ರತಿಪಕ್ಷ ನಾಯಕ ಅಲೆಕ್ಸಿ ನವಾಲ್ನಿಯನ್ನು ಬೆಂಬಲಿಸಿ ರಶ್ಯಾದ್ಯಂತವಿರುವ ಹತ್ತಾರು ನಗರಗಳಲ್ಲಿ ಬುಧವಾರ ಜನರು ಮೆರವಣಿಗೆಗಳನ್ನು ನಡೆಸಿದರು. ಈ ಸಂದರ್ಭದಲ್ಲಿ ಪೊಲೀಸರು 1,700ಕ್ಕೂ ಅಧಿಕ ಮಂದಿಯನ್ನು ಬಂಧಿಸಿದರು.

ನವಾಲ್ನಿಗೆ ಸ್ವಾತಂತ್ರ್ಯ ಮತ್ತು ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡಬೇಕು ಎಂದು ಆಗ್ರಹಿಸಿ ಬುಧವಾರ ಸಂಜೆ ದೇಶಾದ್ಯಂತ ಸಾವಿರಾರು ಜನರು ರಸ್ತೆಗಿಳಿದರು.

 ಪೊಲೀಸರು 97 ನಗರಗಳಲ್ಲಿ 1,783ಕ್ಕೂ ಅಧಿಕ ಮಂದಿಯನ್ನು ಬಂಧಿಸಿದರು ಎಂದು ‘ಒವಿಡಿ-ಇನ್ಫೊ’ ಎಂಬ ನಿಗಾ ಸಂಸ್ಥೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News