ಆಸ್ಟ್ರೇಲಿಯದ ವಿರುದ್ಧ ಪ್ರತೀಕಾರ: ಚೀನಾ ಎಚ್ಚರಿಕೆ

Update: 2021-04-22 18:30 GMT

ಬೀಜಿಂಗ್ (ಚೀನಾ), ಎ. 22: ತನ್ನ ಮಹತ್ವಾಕಾಂಕ್ಷೆಯ ಬೆಲ್ಟ್ ಆ್ಯಂಡ್ ರೋಡ್ ಇನಿಶಿಯೇಟಿವ್ಗೆ ಸಂಬಂಧಿಸಿದ ಒಪ್ಪಂದವನ್ನು ಆಸ್ಟ್ರೇಲಿಯ ಹಠಾತ್ತನೆ ರದ್ದುಪಡಿಸಿರುವುದು ಉಭಯ ದೇಶಗಳ ಸಂಬಂಧಕ್ಕೆ ‘ಗಂಭೀರ ಹಾನಿ’ಯುಂಟು ಮಾಡಿದೆ ಎಂದು ಚೀನಾ ಗುರುವಾರ ಹೇಳಿದೆ ಹಾಗೂ ಇದರ ವಿರುದ್ಧ ಪ್ರತೀಕಾರಾತ್ಮಕ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಎಚ್ಚರಿಸಿದೆ.

ಆಸ್ಟ್ರೇಲಿಯದ ವಿಕ್ಟೋರಿಯ ರಾಜ್ಯವು ಚೀನಾದೊಂದಿಗೆ ಬೆಲ್ಟ್ ಆ್ಯಂಡ್ ರೋಡ್ ಇನಿಶಿಯೇಟಿವ್ (ಬಿಆರ್ಐ)ಗೆ ಸಂಬಂಧಿಸಿದ ಒಪ್ಪಂದವನ್ನು ಮಾಡಿಕೊಂಡಿತ್ತು. ಈ ಒಪ್ಪಂದವನ್ನು ಬುಧವಾರ ಆಸ್ಟ್ರೇಲಿಯದ ಕೇಂದ್ರ ಸರಕಾರ ರದ್ದುಪಡಿಸಿದೆ. ಸುಳ್ಳು ಪ್ರಚಾರಕ್ಕಾಗಿ ಬಳಸಲಾಗುವ ಚೀನಾದ ಬೃಹತ್ ಮೂಲಸೌಕರ್ಯ ಯೋಜನೆಯಲ್ಲಿ ಆಸ್ಟ್ರೇಲಿಯ ಭಾಗಿಯಾಗುವುದನ್ನು ತಪ್ಪಿಸುವುದಕ್ಕಾಗಿ ಈ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯವಾಗಿತ್ತು ಎಂದು ಆಸ್ಟ್ರೇಲಿಯದ ರಕ್ಷಣಾ ಸಚಿವ ಪೀಟರ್ ಡಟನ್ ಹೇಳಿದ್ದಾರೆ.

 ಕೊರೋನ ವೈರಸ್ ಮೂಲದ ವಿಚಾರದಲ್ಲಿ ಉಭಯ ದೇಶಗಳ ನಡುವಿನ ಜಗಳ ಮತ್ತು ಚೀನಾದ ಟೆಲಿಕಾಂ ದೈತ್ಯ ವಾವೇಗೆ ಆಸ್ಟ್ರೇಲಿಯ ವಿಧಿಸಿದ ನಿಷೇಧದ ಹಿನ್ನೆಲೆಯಲ್ಲಿ ಆ ಎರಡು ದೇಶಗಳ ನಡುವಿನ ಸಂಬಂಧವು ತೀವ್ರವಾಗಿ ಕುಸಿದಿದೆ.

“ಆಸ್ಟ್ರೇಲಿಯದ ಹೊಸ ನಿರ್ಧಾರವು ಉಭಯ ದೇಶಗಳ ನಡುವಿನ ನಂಬಿಕೆಗೆ ವಿಷ ಹಾಕಿದೆ. ಸಂಬಂಧಕ್ಕೆ ಗಂಭೀರ ಹಾನಿಯಾಗಿದೆ” ಎಂದು ಚೀನಾ ವಿದೇಶ ಸಚಿವಾಲಯದ ವಕ್ತಾರ ವಾಂಗ್ ವೆನ್ಬಿನ್ ಬೀಜಿಂಗ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.

“ಇದಕ್ಕೆ ಪ್ರತಿಯಾಗಿ ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳುವ ಹಕ್ಕನ್ನು ಚೀನಾ ಕಾದಿರಿಸಿದೆ”  ಎಂದರು.

ನಾವು ಯಾರಿಗೂ ಮಣಿಯುವುದಿಲ್ಲ: ಆಸ್ಟ್ರೇಲಿಯ

ಆಸ್ಟ್ರೇಲಿಯ ಪ್ರತೀಕಾರಾತ್ಮಕ ಕ್ರಮಗಳನ್ನು ತೆಗೆದುಕೊಂಡರೆ ‘‘ನನಗೆ ತುಂಬಾ ನಿರಾಶೆಯಾಗುತ್ತದೆ’’ ಎಂದು ಆಸ್ಟ್ರೇಲಿಯದ ರಕ್ಷಣಾ ಸಚಿವ ಪೀಟರ್ ಡಟನ್ ಹೇಳಿದ್ದಾರೆ. ಆದರೆ, ‘‘ಆಸ್ಟ್ರೇಲಿಯವು ಯಾರಿಗೂ ಮಣಿಯುವುದಿಲ್ಲ’’ ಎಂದು ಅವರು ತಿರುಗೇಟು ನೀಡಿದ್ದಾರೆ.

“ನಾವು ನಂಬಿರುವ ವೌಲ್ಯಗಳನ್ನು ನಾವು ಯಾವಾಗಲೂ ಎತ್ತಿ ಹಿಡಿಯುತ್ತೇವೆ. ಅದನ್ನೇ ನಾವು ಇಲ್ಲಿ ಮಾಡಿದ್ದೇವೆ” ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News