×
Ad

ಮಂಗಳನ ಆಕಾಶದಲ್ಲಿ 2ನೇ ಹಾರಾಟ ನಡೆಸಿದ ಹೆಲಿಕಾಪ್ಟರ್

Update: 2021-04-23 23:00 IST

ವಾಶಿಂಗ್ಟನ್, ಎ. 23: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಗುರುವಾರ ಮಂಗಳ ಗ್ರಹದ ಆಕಾಶದಲ್ಲಿ ಎರಡನೇ ಬಾರಿಗೆ ಪುಟ್ಟ ಹೆಲಿಕಾಪ್ಟರ್ ‘ಇಂಜೀನ್ಯೂಟಿ’ಯನ್ನು ಯಶಸ್ವಿಯಾಗಿ ಹಾರಿಸಿದೆ.

52 ಸೆಕೆಂಡ್‌ಗಳ ಕಾಲ ಮಂಗಳನ ಆಕಾಶದಲ್ಲಿ ಹಾರಾಟ ನಡೆಸಿದ ಹೆಲಿಕಾಪ್ಟರ್ 5 ಮೀಟರ್ (16 ಅಡಿ)ವರೆಗೆ ಮೇಲೇರಿತು.

‘‘ಈವರೆಗೆ ನಾವು ಸ್ವೀಕರಿಸಿದ ಹಾಗೂ ವಿಶ್ಲೇಷಿಸಿದ ದತ್ತಾಂಶಗಳು ಹಾರಾಟವು ನಿರೀಕ್ಷಿತ ಮಟ್ಟವನ್ನು ತಲುಪಿದೆ ಎನ್ನುವುದನ್ನು ಸೂಚಿಸಿವೆ’’ ಎಂದು ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿರುವ ನಾಸಾದ ಜೆಟ್ ಪ್ರೊಪಲ್ಶನ್ ಲ್ಯಾಬರೇಟರಿಯಲ್ಲಿ ಇಂಜೀನ್ಯೂಟಿಯ ಮುಖ್ಯ ಇಂಜಿನಿಯರ್ ಆಗಿರುವ ಬಾಬ್ ಬಲರಾಮ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

‘‘ನಾವು ಮಂಗಳನ ಆಕಾಶದಲ್ಲಿ ಈಗ ಎರಡು ಹಾರಾಟಗಳನ್ನು ನಡೆಸಿದ್ದೇವೆ. ಈ ತಿಂಗಳು ಇಂಜೀನ್ಯೂಟಿಯ ಮೂಲಕ ನಾವು ತುಂಬಾ ಕಲಿಯಲಿಕ್ಕಿದೆ’’ ಎಂದರು.

1.8 ಕಿಲೋಗ್ರಾಮ್ ತೂಗುವ ಪುಟ್ಟ ಹೆಲಿಕಾಪ್ಟರ್‌ನ ಮೊದಲ ಹಾರಾಟ ಸೋಮವಾರ ನಡೆದಿತ್ತು. ಅದು ಇನ್ನೊಂದು ಗ್ರಹದ ಆಕಾಶದಲ್ಲಿ ಮಾನವರು ನಡೆಸಿದ ಮೊದಲ ಹಾರಾಟವಾಗಿತ್ತು. ಅಂದು ಇಂಜೀನ್ಯೂಟಿಯು 39.1 ಸೆಕೆಂಡ್‌ಗಳ ಕಾಲ ಹಾರಾಡಿ 10 ಅಡಿ ಎತ್ತರಕ್ಕೆ ಹೋಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News