ಭಾರತ, ಬ್ರೆಝಿಲ್, ಟರ್ಕಿಯಿಂದ ಬರುವ ಪ್ರವಾಸಿಗರಿಗೆ ನೈಜೀರಿಯ ನಿಷೇಧ

Update: 2021-05-02 18:05 GMT

ಅಬುಜ (ನೈಜೀರಿಯ), ಮೇ 2: ಕಳೆದ 14 ದಿನಗಳಲ್ಲಿ ಭಾರತ, ಬ್ರೆಝಿಲ್ ಮತ್ತು ಟರ್ಕಿ ದೇಶಗಳಲ್ಲಿದ್ದ ತನ್ನ ಪ್ರಜೆಗಳಲ್ಲದವರು ದೇಶ ಪ್ರವೇಶಿಸುವುದನ್ನು ನೈಜೀರಿಯ ನಿಷೇಧಿಸಿದೆ. ಈ ದೇಶಗಳಲ್ಲಿ ಕೊರೋನ ವೈರಸ್ ಪ್ರಕರಣಗಳು ಅಗಾಧ ಸಂಖ್ಯೆಯಲ್ಲಿ ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಅದು ಈ ಕ್ರಮ ತೆಗೆದುಕೊಂಡಿದೆ.

ಈ ಮೂರು ದೇಶಗಳ ಮೂಲಕ ಹಾದು ಹೋದವರಿಗೆ ಈ ನಿಷೇಧ ಅನ್ವಯಿಸುವುದಿಲ್ಲ ಎಂದು ಕೋವಿಡ್-19 ಕುರಿತ ಅಧ್ಯಕ್ಷರ ನಿಗಾ ಸಮಿತಿ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಇತರ ದೇಶಗಳಿಂದ ನೈಜೀರಿಯಕ್ಕೆ ಬಂದಿರುವ ಕೋವಿಡ್-19 ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗದಂತೆ ನೋಡಿಕೊಳ್ಳುವುದಕ್ಕಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿಕೆ ತಿಳಿಸಿದೆ.

ಕಳೆದ 14 ದಿನಗಳಲ್ಲಿ ಆ ಮೂರು ದೇಶಗಳಲ್ಲಿದ್ದ ನೈಜೀರಿಯ ಪ್ರಜೆಗಳು ಮತ್ತು ಅದರ ಖಾಯಂ ನಿವಾಸಿಗಳು ದೇಶ ಪ್ರವೇಶಿಸುವ ಮೊದಲು ಸರಕಾರಿ ಮಾನ್ಯತೆಯ ಸ್ಥಳಗಳಲ್ಲಿ 14 ದಿನಗಳ ಕಡ್ಡಾಯ ಕ್ವಾರಂಟೈನ್‌ಗೆ ಒಳಪಡಬೇಕು ಎಂದು ಅದು ಹೇಳಿದೆ.

ಈ ಮೂರು ದೇಶಗಳ ಹೊರತಾಗಿ, ಬೇರೆ ದೇಶಗಳಿಂದ ಇನ್ನು ಮುಂದೆ ನೈಜೀರಿಯಕ್ಕೆ ಬರುವ ಎಲ್ಲ ಪ್ರಯಾಣಿಕರು, ಪ್ರಯಾಣ ಕೈಗೊಳ್ಳುವ ಮೊದಲ 72 ಗಂಟೆಗಳ ಅವಧಿಯಲ್ಲಿ ಪಡೆದಿರುವ ಕೋವಿಡ್-19 (ನೆಗೆಟಿವ್) ಪ್ರಮಾಣಪತ್ರವನ್ನು ಹಾಜರುಪಡಿಸಬೇಕು. ಇದಕ್ಕೂ ಮೊದಲು, ಈ ಅವಧಿ 96 ಗಂಟೆಗಳಾಗಿತ್ತು.

ಆಫ್ರಿಕದ ಅತ್ಯಂತ ಹೆಚ್ಚು ಜನಭರಿತ ದೇಶವಾಗಿರುವ ನೈಜೀರಿಯದಲ್ಲಿ ಈವರೆಗೆ ಸುಮಾರು 1,65.000 ಕೊರೋನ ವೈರಸ್ ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ 2,063 ಮಂದಿ ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News