ಮ್ಯಾನ್ಮಾರ್: ಬೃಹತ್ ಪ್ರತಿಭಟನೆ; ಸೈನಿಕರ ಗುಂಡಿಗೆ 7 ಬಲಿ

Update: 2021-05-03 18:18 GMT

ಯಾಂಗನ್ (ಮ್ಯಾನ್ಮಾರ್), ಮೇ 3: ಮ್ಯಾನ್ಮಾರ್‌ನ ಸೇನಾಡಳಿತದ ವಿರುದ್ಧ ರವಿವಾರ ಬೃಹತ್ ಪ್ರತಿಭಟನೆ ನಡೆಯಿತು. ಆದರೆ ಭದ್ರತಾ ಪಡೆಗಳು ಪ್ರತಿಭಟನಕಾರರ ಮೇಲೆ ಗುಂಡು ಹಾರಿಸಿದ್ದು, ಏಳು ಮಂದಿ ಮೃತಪಟ್ಟಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಜಾಗತಿಕ ಮ್ಯಾನ್ಮಾರ್ ವಸಂತ ಕ್ರಾಂತಿಯ ಭಾಗವಾಗಿ ಜಗತ್ತಿನಾದ್ಯಂತವಿರುವ ಮ್ಯಾನ್ಮಾರ್ ಸಮುದಾಯಗಳು ಪ್ರದರ್ಶನ ನಡೆಸಿರುವ ಸಮಯದಲ್ಲಿ ಮ್ಯಾನ್ಮಾರ್‌ನಲ್ಲೂ ಪ್ರತಿಭಟನೆಗಳು ನಡೆದವು.

ಮ್ಯಾನ್ಮಾರ್ ಜನರ ಒಗ್ಗಟ್ಟಿನ ಧ್ವನಿಯ ಮೂಲಕ ಜಗತ್ತನ್ನು ಎಚ್ಚರಿಸುವುದು ಈ ಆಂದೋಲನದ ಉದ್ದೇಶವಾಗಿದೆ ಎಂದು ಸಂಘಟಕರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಯಾಂಗನ್ ಮತ್ತು ಮಾಂಡಲೇ ಸೇರಿದಂತೆ ಮ್ಯಾನ್ಮಾರ್‌ನಾದ್ಯಂತವಿರುವ ನಗರಗಳು ಮತ್ತು ಪಟ್ಟಣಗಳ ರಸ್ತೆಗಳಲ್ಲಿ ಪ್ರತಿಭಟನಕಾರರು ಮೆರವಣಿಗೆ ನಡೆಸಿದರು ಎಂದು ಮಿಝಿಮ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಮ್ಯಾನ್ಮಾರ್ ಸೇನೆ ಫೆಬ್ರವರಿ 1ರಂದು ಕ್ಷಿಪ್ರಕ್ರಾಂತಿ ನಡೆಸಿ ಚುನಾಯಿತ ಸರಕಾರದಿಂದ ದೇಶದ ಆಡಳಿತವನ್ನು ಕಸಿದುಕೊಂಡಿದೆ. ಅಂದಿನಿಂದ ದೇಶದಲ್ಲಿ ಬೃಹತ್ ಪ್ರತಿಭಟನೆಗಳು ನಡೆಯುತ್ತಿವೆ. ಪ್ರತಿಭಟನೆಗಳನ್ನು ದಮನಿಸುವುದಕ್ಕಾಗಿ ಸೈನಿಕರು ಪ್ರತಿಭಟನಕಾರರ ಮೇಲೆ ಗುಂಡು ಹಾರಿಸುತ್ತಿದ್ದು, ಈವರೆಗೆ ಕನಿಷ್ಠ 759 ಮಂದಿ ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News