ಭಾರತದಿಂದ ಮರಳುವವರಿಗೆ ಜೈಲು ಶಿಕ್ಷೆ ವಿಧಿಸುವ ಬೆದರಿಕೆಯಿಂದ ಹಿಂದೆ ಸರಿದ ಆಸ್ಟ್ರೇಲಿಯ ಪ್ರಧಾನಿ

Update: 2021-05-04 18:17 GMT
photo: twitter(@ScottMorrisonMP)

 ಸಿಡ್ನಿ,ಮೇ 4: ಕೋವಿಡ್-19 ಹಾವಳಿಗೆ ತುತ್ತಾಗಿರುವ ಭಾರತದಿಂದ ಪರಾರಿಯಾಗಿ ಸ್ವದೇಶಕ್ಕೆ ಆಗಮಿಸಲು ಯತ್ನಿಸುತ್ತಿರುವ ಆಸ್ಟ್ರೇಲಿಯನ್ನರಿಗೆ ಜೈಲು ವಾಸ ವಿಧಿಸುವುದಾಗಿ ಬೆದರಿಕೆ ಹಾಕಿದ್ದಕ್ಕಾಗಿ ವ್ಯಾಪಕವಾಗಿ ಖಂಡನೆಗೊಳಗಾಗಿರುವ ಆಸ್ಟ್ರೇಲಿಯದ ಪ್ರಧಾನಿ ಸ್ಕಾಟ್ ಮಾರಿಸನ್ ಕೊನೆಗೂ ತನ್ನ ಹೇಳಿಕೆಯಿಂದ ಹಿಂದೆ ಸರಿದಿದ್ದಾರೆ.

  ಭಾರತದಿಂದ ಆಗಮಿಸುವ ಪ್ರಯಾಣಿಕರಿಗೆ ಸ್ಕಾಟ್ ಮೊರಿಸನ್ ಅವರ ಸರಕಾರವು ಮೇ 15ರವರೆಗೆ ನಿಷೇಧ ವಿಧಿಸಿತ್ತು ಹಾಗೂ ಆಸ್ಟ್ರೇಲಿಯ ಪ್ರಜೆಗಳು ಸೇರಿದಂತೆ ಅದನ್ನು ಉಲ್ಲಂಘಿಸುವವರಿಗೆ ಜೈಲು ಶಿಕ್ಷೆ ವಿಧಿಸುವ ಬೆದರಿಕೆ ಹಾಕಿತ್ತು.

  ತನ್ನ ಈ ಬೆದರಿಕೆಗೆ ವ್ಯಾಪಕವಾಗಿ ಆಕ್ರೋಶ ವ್ಯಕ್ತವಾದ ನಡುವೆ, ಮೊರಿಸನ್ ಮಂಗಳವಾರ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿ, ನಿಷೇಧವನ್ನು ಉಲ್ಲಂಘಿಸುವ ಆಸ್ಟ್ರೇಲಿಯನ್ನರನ್ನು ಜೈಲಿಗೆ ಹಾಕುವ ಸಾಧ್ಯತೆ ತೀರಾ ಶೂನ್ಯ ಎಂದು ಹೇಳಿದ್ದಾರೆ.

   ಸುಮಾರು 9 ಸಾವಿರ ಆಸ್ಟ್ರೇಲಿಯನ್ನರು ಭಾರತದಲ್ಲಿದ್ದಾರೆಂದು ನಂಬಲಾಗಿದೆ.ಐಪಿಎಲ್ ಪಂದ್ಯದಲ್ಲಿ ಪಾಲ್ಗೊಂಡಿರುವ ಪ್ರಸಿದ್ಧ ಕ್ರಿಕೆಟ್ ತಾರೆಯರು ಕೂಡಾ ಪ್ರಸಕ್ತ ಭಾರತದಲ್ಲಿದ್ದಾರೆ. ಮಾಜಿ ಕ್ರಿಕೆಟಿಗ ಹಾಗೂ ವೀಕ್ಷಕ ವಿವರಣೆಗಾರ ಮೈಕಲ್ ಸ್ಲೇಟರ್ ಅವರು ಭಾರತದಲ್ಲಿರುವ ಆಸ್ಟ್ರೇಲಿಯನ್ನರಿಗೆ ನಿಷೇಧ ವಿದಿಸುವ ಮೊರಿಸನ್ ಅವರ ನಿರ್ಧಾರವನ್ನು ತೀವ್ರವಾಗಿ ಖಂಡಿಸಿದ್ದರು. ಆಸ್ಟ್ರೇಲಿಯ ಪ್ರಧಾನಿಯ ಹೇಳಿಕೆಯು ‘ ನಾಚಿಕೆಗೇಡಿನದ್ದಾಗಿದೆ’ ಎಂದವರು ಕಿಡಿಕಾರಿದ್ದಾರೆ. ‘‘ ಪ್ರಧಾನಿಯವರೇ ನಿಮ್ಮ ಕೈಗಳಲ್ಲಿ ರಕ್ತವಿದೆ. ನಮ್ಮನ್ನು ಈ ರೀತಿಯಾಗಿ ನಡೆಸಿಕೊಳ್ಳಲು ನಿಮಗೆಷ್ಟು ಧೈರ್ಯ’ ಎಂದವರು ಟ್ವೀಟ್ ಮಾಡಿದ್ದರು. ‘‘ ಒಂದು ವೇಳೆ ನಮ್ಮ ಸರಕಾರವು ಆಸ್ಟ್ರೇಲಿಯನ್ನರ ಸುರಕ್ಷತೆಯ ಬಗ್ಗೆ ಕಾಳಜಿ ಹೊಂದಿದಲ್ಲಿ ಅದು ನಮಗೆ ತವರಿಗೆ ಆಗಮಿಸಲು ಅನುಮತಿ ನೀಡಬೇಕಿತ್ತು’’ ಎಂದಿದ್ದಾರೆ. ಮೊರಿಸನ್ ಅವರ ಹೇಳಿಕೆಯಲ್ಲಿ ಜನಾಂಗೀಯವಾದ ಕೊಳಕುವಾಸನೆಯಿದೆ ಎಂದು ಸ್ಕೈ ನ್ಯೂಸ್‌ನ ವೀಕ್ಷಕ ವಿವರಣೆಗಾರ ಆ್ಯಂಡ್ರೂ ಬೋಲ್ಟ್ ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News