ಭಾರತದಲ್ಲಿ ಕೋವಿಡ್ ನಿಯಂತ್ರಣಕ್ಕೆ ಲಾಕ್‌ಡೌನ್, ಲಸಿಕೆ ಅಭಿಯಾನ ಅಗತ್ಯ: ಅಮೆರಿಕದ ಆರೋಗ್ಯ ತಜ್ಞ ಫೌಸಿ ಪ್ರತಿಪಾದನೆ

Update: 2021-05-04 17:45 GMT

ವಾಶಿಂಗ್ಟನ್,ಮೇ 4: ಕೋವಿಡ್-19 ಅಟ್ಟಹಾಸದಿಂದಾಗಿ ಭಾರತದಲ್ಲಿ ಪರಿಸ್ಥಿತಿ ಅತ್ಯಂತ ‘ಹತಾಶದಾಯಕ’ವಾಗಿದೆ ಎಂದು ಅಮೆರಿಕದ ಉನ್ನತ ಸಾರ್ವಜನಿಕ ಆರೋಗ್ಯ ತಜ್ಞ ಡಾ. ಆ್ಯಂಟನಿ ಫೌಸಿ ಬಣ್ಣಿಸಿದ್ದಾರೆ. ಕೋವಿಡ್ ಸಾಂಕ್ರಾಮಿಕವನ್ನು ನಿಯಂತ್ರಿಸಲು ಸರಕಾರವು ಸಶಸ್ತ್ರ ಪಡೆಗಳು ಸೇರಿದಂತೆ ತನ್ನ ಎಲ್ಲಾ ಸಂಪನ್ಮೂಲಗಳನ್ನು ಬಳಸಿಕೊಳ್ಳಬೇಕು ಮತ್ತು ಚೀನಾ ಮಾದರಿಯಲ್ಲಿ ತಾತ್ಕಾಲಿಕ ಕೋವಿಡ್ ಕ್ಷೇತ್ರೀಯ ಆಸ್ಪತ್ರೆಗಳನ್ನು ಸ್ಥಾಪಿಸಬೇಕು ಎಂದವರು ಕರೆ ನೀಡಿದ್ದಾರೆ. ಇತರ ದೇಶಗಳ ಭಾರತಕ್ಕೆ ಔಷಧಿ ಸಾಮಾಗ್ರಿಗಳು ಮಾತ್ರವಲ್ಲದೆ ಸಿಬ್ಬಂದಿಯನ್ನು ಕೂಡಾ ಒದಗಿಸಿಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಪಿಟಿಐ ಸುದ್ದಿಸಂಸ್ಥೆಗೆ ಸೋಮವಾರ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಫೌಸಿ, ಭಾರತದಲ್ಲಿ ಕೋವಿಡ್ ಸೋಂಕು ನಿರಂತರವಾಗಿ ಹರಡುವುದನ್ನು ತಡೆಯಲು ಆರು ತಿಂಗಳುಗಳ ಕಾಲ ಅಲ್ಲವಾದರೂ, ಕೆಲವು ವಾರಗಳವರೆಗಾದರೂ ಲಾಕ್‌ಡೌನ್ ಹೇರುವುದು ಅಗತ್ಯವೆಂದು ಕರೆ ನೀಡಿದ್ದಾರೆ. ಫೌಸಿ ಅವರು ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರ ಮುಖ್ಯ ಸಲಹೆಗಾರರೂ ಆಗಿದ್ದಾರೆ.

ದೇಶಾದ್ಯಂತ ಮಾರಣಾಂತಿಕ ಕೊರೋನ ವೈರಸ್‌ನ ಹರಡುವಿಕೆಯನ್ನು ನಿಯಂತ್ರಿಸಲು ಸಾಮಹಿಕ ಲಸಿಕೆ ಅಭಿಯಾನವನ್ನು ಚುರುಕುಗೊಳಿಸುವಂತೆಯೂ ಫೌಸಿ ಶಿಫಾರಸು ಮಾಡಿದ್ದಾರೆ. ‘‘ ಈಗಿಂದೀಗಲೆ ಅವರು (ಭಾರತ ಸರಕಾರ) ತಮಗೆ ಸಾಧ್ಯವಿರುವಷ್ಟು ಜನರಿಗೆ ಲಸಿಕೆಯನ್ನು ನೀಡಬೇಕು. ತಾವಾಗಿಯೇ ಅಭಿವೃದ್ಧಿಪಡಿಸಿರುವ ಲಸಿಕೆಗಳಲ್ಲದೆ, ಅಮೆರಿಕ ಅಥವಾ ರಶ್ಯ ಸೇರಿದಂತೆ ಾ ಲಸಿಕೆಯನ್ನು ಪೂರೈಕೆ ಮಾಡಲು ಇಚ್ಚಿಸುವ ಇತರ ಯಾವುದೇ ದೇಶಗಳಿಂದಲೂ ಲಸಿಕೆಗಳನ್ನು ಖರೀದಿಸಿ, ಜನರಿಗೆ ನೀಡಬೇಕು’’ ಎಂದು ಫೌಸಿ ಹೇಳಿದ್ದಾರೆ.

ಆದರೆ ಈಗ ಲಸಿಕೆಯನ್ನು ನೀಡಿದ ಮಾತ್ರಕ್ಕೆ ಇಂದಿನ ಸಮಸ್ಯೆಯು ಬಗೆಹರಿಯಲಾರದು ಎಂದವರು ಸ್ಪಷ್ಟಪಡಿಸಿದರು. ಆದರೆ ಈಗ ನೀಡಿದ ಲಸಿಕೆಯು ಹಲವಾರು ವಾರಗಳ ಬಳಿಕ ಸಮಸ್ಯೆಯನ್ನು ತಡೆಗಟ್ಟಲು ನೆರವಾಗುತ್ತದೆ ಎಂದವರು ಹೇಳಿದರು.

80 ವರ್ಷ ವಯಸ್ಸಿನ ಫೌಸಿ ಅವರು ಖ್ಯಾತ ವೈದ್ಯ ಹಾಗೂ ರೋಗ ನಿರೋಧಕ ತಜ್ಞರಾಗಿದ್ದು, ಅಲರ್ಜಿ ಮತ್ತು ಸೋಂಕುರೋಗಗಳ ಕುರಿತ ಅಮೆರಿಕದ ರಾಷ್ಟ್ರೀಯ ಇನ್ಸ್‌ಟಿಟ್ಯೂಟ್‌ನ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News