ಫೈಝರ್‌ನಿಂದ ಹದಿಹರೆಯದ ಮಕ್ಕಳಿಗೂ ಕೋವಿಡ್ ಲಸಿಕೆ: ಮುಂದಿನ ವಾರ ಅಮೆರಿಕದಿಂದ ಅನುಮೋದನೆ ಸಾಧ್ಯತೆ

Update: 2021-05-04 17:49 GMT

 ವಾಶಿಂಗ್ಟನ್,ಮೇ 4: 12 ಹಾಗೂ 15 ವರ್ಷದ ನಡುವಿನ ವಯಸ್ಸಿನ ಮಕ್ಕಳಿಗೆ ಫೈಝರ್-ಬಯೋನ್‌ಟೆಕ್ ಕೋವಿಡ್-19 ಲಸಿಕೆಯನ್ನು ನೀಡಲು ಅಮೆರಿಕವು ಮುಂದಿನ ವಾರ ಹಸಿರು ನಿಶಾನೆಯನ್ನು ತೋರಿಸುವ ನಿರೀಕ್ಷೆಯಿದೆ ಎಂದು ಅಮೆರಿಕನ್ ಮಾಧ್ಯಮ ವರದಿಯೊಂದು ತಿಳಿಸಿದೆ.

 12-15ರ ವಯೋಮಾನದ ಮಕ್ಕಳಿಗೆ ಕೋವಿಡ್-19 ಲಸಿಕೆಯ ತುರ್ತು ಬಳಕೆಗೆ ಅನುಮತಿ ಕೋರಿ ಫೈಝರ್ ಕಂಪೆನಿಯು ಅಮೆರಿಕದ ಆಹಾರ ಮತ್ತು ಔಷಧಿ ಆಡಳಿತ ಇಲಾಖೆ (ಎಫ್‌ಡಿಎ)ಗೆ ಅರ್ಜಿ ಸಲ್ಲಿಸಿತ್ತು ಎಂದು ಸರಕಾರಿ ಅಧಿಕಾರಿಯೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ ಸಿಎನ್‌ಎನ್ ಸುದ್ದಿಸಂಸ್ಥೆ ವರದಿ ಮಾಡಿದೆ.

ಆದರೆ ಎಫ್‌ಡಿಎ ವಕ್ತಾರೆಯೊಬ್ಬರು ಈ ಬಗ್ಗೆ ಯಾವುದೇ ವಿವರಗಳನ್ನು ನೀಡಲು ನಿರಾಕರಿಸಿದ್ದಾರೆ. ಫೈಝರ್-ಬಯೋನ್‌ಟೆಕ್‌ನ ಮನವಿಯನ್ನು ತುತಾರ್ಗಿ ಮತ್ತು ಪಾರದರ್ಶಕವಾಗಿ ಪರಿಶೀಲಿಸುತ್ತಿದ್ದೇವೆ ಎಂದವರು ಹೇಳಿದ್ದಾರೆ.

ಕಳೆದ ಮಾರ್ಚ್‌ನಲ್ಲಿ 12ರಿಂದ 15 ವರ್ಷದೊಳಗಿನ 2260 ಮಕ್ಕಳ ಮೇಲೆ ತಾನು ಲಸಿಕೆಯ ಕ್ಲಿನಿಕಲ್ ಪ್ರಯೋಗ ನಡೆಸಿರುವ ದತ್ತಾಂಶವನ್ನು ಎಫ್‌ಡಿಎಗೆ ಸಲ್ಲಿಸಿರುವುದಾಗಿ ಅಮೆರಿಕದ ಫ್ಯಾರ್ಮಾಸ್ಯೂಟಿಕಲ್ ದಿಗ್ಗಜ ಸಂಸ್ಥೆಯಾಗಿರುವ ಫೈಝರ್ ತಿಳಿಸಿದೆ. ಈ ಲಸಿಕೆಯು ಅತ್ಯಂತ ಪರಿಣಾಮಕಾರಿ ಹಾಗೂ ಉತ್ತಮ ಸಹಿಷ್ಣುತಾ ಸಾಮರ್ಥ್ಯವನ್ನು ಹೊಂದಿದೆ ಎಂದು ದತ್ತಾಂಶಗಳು ಸಾಬೀತುಪಡಿಸಿವೆ ಎಂದು ಅದು ತಿಳಿಸಿದೆ. ಇದಕ್ಕಿಂತಲೂ ಕೆಳವಯಸ್ಸಿನ ಮಕ್ಕಳ ಮೇಲೆ ಲಸಿಕೆಯ ಪರೀಕ್ಷೆಯು ನಡೆಯುತ್ತಿರುವುದಾಗಿ ತಿಳಿಸಿದ್ದಾರೆ.

 ಇನ್ನೊಂದು ಪ್ರಮುಖ ಔಷಧಿ ತಯಾರಕ ಸಂಸ್ಥೆ ಮೊಡೆರ್ನಾ ಕೂಡಾ ಹದಿಹರೆಯದ ಮತ್ತು ಕಿರಿಯ ವಯಸ್ಸಿನ ಮಕ್ಕಳ ಮೇಲೆ ತನ್ನ ನೂತನ ಲಸಿಕೆಯ ಪ್ರಾಯೋಗಿಕ ಪರೀಕ್ಷೆಯನ್ನು ನಡೆಸಿದ್ದು, ಈ ಬೇಸಿಗೆಯೊಳಗೆ ಫಲಿತಾಂಶ ದೊರೆಯುವ ನಿರೀಕ್ಷೆಯಿದೆ. ಜಾನ್ಸನ್ ಆ್ಯಂಡ್ ಜಾನ್ಸನ್ ಕೂಡಾ ಶಿಶುಗಳ ಮೇಲೆ ತನ್ನ ಲಸಿಕೆಯ ಕ್ಲಿನಿಕಲ್ ಪ್ರಯೋಗವನ್ನು ನಡೆಸುವ ಯೋಜನೆಯನ್ನು ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News