ವಿವಾಹ ವಿಚ್ಚೇದನಕ್ಕೆ ಬಿಲ್‌ಗೇಟ್ಸ್: ದಂಪತಿ ನಿರ್ಧಾರ

Update: 2021-05-04 17:55 GMT

  ಸಿಯಾಟಲ್,ಮೇ 4: ಮೈಕ್ರೋಸಾಫ್ಟ್ ಸಂಸ್ಥೆಯ ಸಹ ಸಂಸ್ಥಾಪಕ, ಶತ ಕೋಟ್ಯಾಧೀಶ ಉದ್ಯಮಿ ಬಿಲ್ ಗೇಟ್ಸ್ ಹಾಗೂ ಅವರ ಪತ್ನಿ ಮೇಲಿಂಡಾ ಗೇಟ್ಸ್ ವಿವಾಹವಿಚ್ಚೇದನವಾಗುವುದಾಗಿ ತಿಳಿಸಿದ್ದಾರೆ.

  ಈ ಕುರಿತು ಬಿಲ್‌ಗೇಟ್ಸ್ ಹಾಗೂ ಮೆಲಿಂಡಾ ಸೋಮವಾರ ಪ್ರತ್ಯೇಕವಾಗಿ ಟ್ವೀಟ್‌ಗಳನ್ನು ಮಾಡಿದ್ದು, 27ವರ್ಷಗಳ ದಾಂಪತ್ಯವನ್ನು ಕೊನೆಗೊಳಿಸುವ ನಿರ್ಧಾರವನ್ನು ಕೈಗೊಂಡಿರುವುದಾಗಿ ತಿಳಿಸಿದ್ದಾರೆ.

‘‘ನಾವು ಮೂವರು ಅಸಾಮಾನ್ಯ ಮಕ್ಕಳನ್ನು ಬೆಳೆಸಿದ್ದೇವೆ ಹಾಗೂ ಎಲ್ಲಾ ಜನರು ಆರೋಗ್ಯಕರ, ಉತ್ಪಾದಕಶೀಲ ಬದುಕನ್ನು ಮುನ್ನಡೆಸುವಂತೆ ಮಾಡುವುದಕ್ಕಾಗಿ ಜಗತ್ತಿನಾದ್ಯಂತ ಶ್ರಮಿಸುತ್ತಿರುವ ಪ್ರತಿಷ್ಠಾವೊಂದನ್ನು ನಿರ್ಮಿಸಿದ್ದೇವೆ’’ ಎಂದವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. 65 ಬಿಲ್‌ಗೇಟ್ಸ್ ವಿಶ್ವದ ಮಾಜಿ ನಂ.1 ಶ್ರೀಮಂತನಾಗಿದ್ದು, ಪ್ರಸಕ್ತ ಅವರ ಆಸ್ತಿ 100 ಶತಕೋಟಿ ಡಾಲರ್‌ಗಳಾಗಿವೆ. ಈ ದಂಪತಿಯು ತಮ್ಮ ಸ್ಥಿರಚರಾಸ್ಥಿಗಳನ್ನು ಹೇಗೆ ಹಂಚಿಕೊಳ್ಳಲಿದ್ದಾರೆ ಹಾಗೂ ಅವರ ವಿವಾಹವಿಚ್ಚೇದನದಿಂದ ಪ್ರತಿಷ್ಠಾನದ ಮೇಲಾಗುವ ಪರಿಣಾಮದ ಬಗ್ಗೆ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗಳು ಆರಂಭವಾಗಿವೆ. 56 ವರ್ಷದ ಮೆಲಿಂಡಾ ಮೈಕ್ರೋಸಾಫ್ಟ್ ಸಂಸ್ಥೆಯ ಮಾಜಿ ಮ್ಯಾನೇಜರ್ ಆಗಿದ್ದು, ಬಿಲ್ ಆ್ಯಂಡ್ ಮೆಲಿಂಡಾ ಗೇಟ್ಸ್ ಪ್ರತಿಷ್ಠಾನದ ಸಹ ಸಂಚಾಲಕರಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆಯನ್ನು ಪಡೆದಿದ್ದಾರೆ.

ಬಿಲ್‌ಗೇಟ್ಸ್ ಹಾಗೂ ಮೆಲಿಂಡಾ 1994ರಲ್ಲಿ ಹವಾಯಿಯಲ್ಲಿ ವಿವಾಹವಾದರು. 1987ರಲ್ಲಿ ಮೆಲಿಂಡಾ ಅವರು ಪ್ರಾಡಕ್ಟ್ ಮ್ಯಾನೇಜರ್ ಆಗಿ  ಮೈಕ್ರೋಸಾಫ್ಟ್ ಕಂಪೆನಿಗೆ ಸೇರ್ಪಡೆಯಾದ ಬಳಿಕ ಇಬ್ಬರಿಗೂ ಪರಸ್ಪರ ಪರಿಚಯವಾಗಿತ್ತು.

ಬಿಲ್‌ಗೇಟ್ಸ್ ಹಾಗೂ ಮೆಲಿಂಡಾ ಅವರ ಒಟ್ಟು ಸಂಪತ್ತಿನ ಮೊತ್ತ 146 ಶತಕೋಟಿ ಡಾಲರ್‌ಗಳೆಂದು ಅಂದಾಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News