ಭಾರತೀಯ ಕೊರೋನ ಪ್ರಭೇದ ಹೆಚ್ಚು ಸಾಂಕ್ರಾಮಿಕ: ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್

Update: 2021-05-09 18:33 GMT
ಫೋಟೊ ಕೃಪೆ: twitter.com

ಜಿನೀವ (ಸ್ವಿಟ್ಸರ್ಲ್ಯಾಂಡ್), ಮೇ 9: ಭಾರತದಲ್ಲಿ ಹರಡುತ್ತಿರುವ ಕೊರೋನ ವೈರಸ್ ಪ್ರಭೇದವು ಹೆಚ್ಚು ಸಾಂಕ್ರಾಮಿಕವಾಗಿದೆ ಹಾಗೂ ಪ್ರಸಕ್ತ ಲಭ್ಯವಿರುವ ಲಸಿಕೆಗಳು ಅದರ ವಿರುದ್ಧ ಪರಿಣಾಮಕಾರಿಯಾಗದಿರುವ ಸಾಧ್ಯತೆಯೂ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್ ಶನಿವಾರ ಹೇಳಿದ್ದಾರೆ. ಈಗ ದೇಶದಲ್ಲಿ ನಡೆದಿರುವ ಸಾಂಕ್ರಾಮಿಕ ಸ್ಫೋಟಕ್ಕೆ ಈ ಅಂಶಗಳು ಪ್ರಮುಖವಾಗಿ ಕಾರಣವಾಗಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‌ಕೊರೋನ ವೈರಸ್ನ ಈ ಪ್ರಭೇದವು ಅತ್ಯಂತ ವೇಗವಾಗಿ ಹರಡುತ್ತಿರುವ ಪ್ರಭೇದ ಎನ್ನುವುದನ್ನು ಭಾರತದಲ್ಲಿ ನಾವಿಂದು ನೋಡುತ್ತಿರುವ ಸಾಂಕ್ರಾಮಿಕ ಲಕ್ಷಣಗಳು ಸೂಚಿಸುತ್ತಿವೆ ಎಂದು ಎಎಫ್ಪಿ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಸೌಮ್ಯ ಸ್ವಾಮಿನಾಥನ್ ಹೇಳಿದ್ದಾರೆ.

ಭಾರತದಲ್ಲಿ 24 ಗಂಟೆಗಳ ಅವಧಿಯಲ್ಲಿ 4,000ಕ್ಕಿಂತಲೂ ಅಧಿಕ ಕೋವಿಡ್-19 ಸಾವುಗಳು ಶನಿವಾರ ವರದಿಯಾಗಿವೆ. ಒಂದು ದಿನದ ಅವಧಿಯಲ್ಲಿ ಇಷ್ಟೊಂದು ಸಾವುಗಳು ವರದಿಯಾಗುತ್ತಿರುವುದು ಇದೇ ಮೊದಲ ಬಾರಿಯಾಗಿದೆ.

ಭಾರತದಲ್ಲಿ ಉಂಟಾಗಿರುವ ಹಾಹಾಕಾರಕ್ಕೆ ಕಳೆದ ವರ್ಷದ ಅಕ್ಟೋಬರ್ನಲ್ಲಿ ಮೊದಲ ಬಾರಿಗೆ ಪತ್ತೆಯಾಗಿದ್ದ ಬಿ.1.617 ಕೊರೋನ ವೈರಸ್ ಪ್ರಭೇದವೇ ಪ್ರಮುಖ ಕಾರಣವಾಗಿದೆ ಎಂದು ಭಾರತೀಯರಾಗಿರುವ ಸೌಮ್ಯ ಸ್ವಾಮಿನಾಥನ್ ಹೇಳಿದ್ದಾರೆ.

ಭಾರತದಲ್ಲಿನ ಇಂದಿನ ಪರಿಸ್ಥಿತಿಗೆ ಹಲವು ಕಾರಣಗಳಿವೆ. ಅವುಗಳ ಪೈಕಿ ಅತ್ಯಂತ ವೇಗವಾಗಿ ಹರಡುತ್ತಿರುವ ಕೊರೋನ ವೈರಸ್ ಪ್ರಭೇದವೂ ಒಂದು ಎಂದರು.

6 ಅಡಿಗೂ ಹೆಚ್ಚಿನ ಅಂತರದ ಮೂಲಕವೂ ಕೊರೋನ ಹರಡಬಹುದು

ಉಸಿರಾಟದ ವೇಳೆ ಮೂಗಿನಿಂದ ಬಿಡುಗಡೆಯಾಗುವ ಅತಿ ಸಣ್ಣ ದ್ರವ ಕಣಗಳ ಮೂಲಕ ಜನರು ಹೆಚ್ಚಾಗಿ ಕೊರೋನ ವೈರಸ್ ಸೋಂಕಿಗೆ ಒಳಗಾಗುತ್ತಾರೆ ಎಂದು ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆ ಕೇಂದ್ರ ಶುಕ್ರವಾರ ಬಿಡುಗಡೆ ಮಾಡಿರುವ ಹೊಸ ಮಾರ್ಗದರ್ಶಿ ಸೂಚಿಯಲ್ಲಿ ಹೇಳಿದೆ.

ಸೋಂಕಿನ ಮೂಲದಿಂದ ಮೂರರಿಂದ ಆರು ಅಡಿ ಅಂತರದಲ್ಲಿ ರೋಗ ಹರಡುವ ಅಪಾಯ ಅತಿ ಹೆಚ್ಚಾಗಿರುತ್ತದೆ. ಈ ಅಂತರದಲ್ಲಿ ದ್ರವ ಕಣಗಳ ಸಾಂದ್ರತೆ ಗರಿಷ್ಠವಾಗಿರುತ್ತದೆ ಎಂದು ಅದು ಹೇಳಿದೆ.

ಆರು ಅಡಿಗಿಂತ ಹೆಚ್ಚಿನ ಅಂತರದ ಮೂಲಕವೂ ರೋಗ ಹರಡಬಹುದಾಗಿದೆ. ಆದರೆ, ಈ ಸಾಧ್ಯತೆ ಅಂತರ ಹೆಚ್ಚಾದಂತೆ ಕಡಿಮೆಯಾಗುತ್ತಾ ಹೋಗುತ್ತದೆ ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News