ಈದ್: ತಾಲಿಬಾನ್, ಅಫ್ಘಾನ್ ಸರಕಾರದಿಂದ 3 ದಿನಗಳ ಯುದ್ಧವಿರಾಮ ಘೋಷಣೆ

Update: 2021-05-10 17:40 GMT

ಕಾಬೂಲ್ (ಅಫ್ಘಾನಿಸ್ತಾನ), ಮೇ 10: ಈ ವಾರದ ಈದ್ ಸಂದರ್ಭದಲ್ಲಿ ತಾಲಿಬಾನ್ ಸೋಮವಾರ ಅಫ್ಘಾನಿಸ್ತಾನದಾದ್ಯಂತ ಮೂರು ದಿನಗಳ ಯುದ್ಧವಿರಾಮ ಘೋಷಿಸಿದೆ.

ರಾಜಧಾನಿ ಕಾಬೂಲ್ನಲ್ಲಿರುವ ಶಾಲೆಯೊಂದರ ಹೊರಗೆ ಭೀಕರ ಬಾಂಬ್ ದಾಳಿ ನಡೆದ ಎರಡು ದಿನಗಳ ಬಳಿಕ ತಾಲಿಬಾನ್ ಯುದ್ಧವಿರಾಮದ ಘೋಷಣೆ ಮಾಡಿದೆ. ಆ ದಾಳಿಯಲ್ಲಿ 50ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಮೃತಪಟ್ಟವರಲ್ಲಿ ಹೆಚ್ಚಿನವರು ಶಾಲೆಗೆ ಹೋಗುತ್ತಿದ್ದ ಚಿಕ್ಕ ಬಾಲಕಿಯರು. ಈ ದಾಳಿಯನ್ನು ತಾಲಿಬಾನ್ ನಡೆಸಿದೆ ಎಂದು ಆರೋಪಿಸಲಾಗಿದೆ.

ಈದ್ ನ ಮೊದಲ ದಿನದಿಂದ ಮೂರನೇ ದಿನದವರೆಗೆ ದೇಶಾದ್ಯಂತ ಶತ್ರುವಿನ ವಿರುದ್ಧದ ಎಲ್ಲ ಯುದ್ಧ ಕಾರ್ಯಾಚರಣೆಗಳನ್ನು ನಿಲ್ಲಿಸುವಂತೆ ಇಸ್ಲಾಮಿಕ್ ಎಮಿರೇಟ್ ಮುಜಾಹಿದೀನ್ಗಳಿಗೆ ಸೂಚಿಸಲಾಗಿದೆ ಎಂದು ತಾಲಿಬಾನ್ ಬಿಡುಗಡೆ ಮಾಡಿದ ಹೇಳಿಕೆಯೊಂದು ತಿಳಿಸಿದೆ.

ಆದರೆ, ಈ ದಿನಗಳಲ್ಲಿ ಶತ್ರು ನಿಮ್ಮ ವಿರುದ್ಧ ಯಾವುದೇ ದಾಳಿ ನಡೆಸಿದರೆ, ನಿಮ್ಮನ್ನು ಮತ್ತು ನಿಮ್ಮ ಭೂಭಾಗವನ್ನು ಪ್ರಬಲವಾಗಿ ರಕ್ಷಿಸಿಕೊಳ್ಳಲು ತಯಾರಾಗಿರಿ ಎಂಬುದಾಗಿಯೂ ಅದು ಹೇಳಿದೆ.

ಬಳಿಕ ಇದಕ್ಕೆ ಪ್ರತಿಕ್ರಿಯಿಸಿದ ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ, ಸರಕಾರಿ ಪಡೆಗಳು ಕೂಡ ಈದ್ ಸಂದರ್ಭದಲ್ಲಿ ಮೂರು ದಿನಗಳ ಯುದ್ಧವಿರಾಮ ಆಚರಿಸುತ್ತವೆ ಎಂದು ಘೋಷಿಸಿದರು. ಇನ್ನೂ ಒಂದು ಹೆಜ್ಜೆ ಮುಂದೆ ಹೋದ ಅವರು, ಅಫ್ಘಾನಿಸ್ತಾನದ ಯುದ್ಧವನ್ನು ಕೊನೆಗೊಳಿಸಲು ಶಾಶ್ವತ ಯುದ್ಧವಿರಾಮ ಘೋಷಿಸುವಂತೆ ತಾಲಿಬಾನನ್ನು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News