6 ಸಾವಿರಕ್ಕೂ ಅಧಿಕ ಮಂದಿಗೆ ಉದ್ಯೋಗ ಕಲ್ಪಿಸುವ 10 ಯೋಜನೆಗಳಿಗೆ ಅನುಮೋದನೆ

Update: 2021-05-12 17:25 GMT

ಬೆಂಗಳೂರು, ಮೇ 12: ರಾಜ್ಯದಲ್ಲಿ ಆರು ಸಾವಿರಕ್ಕೂ ಅಧಿಕ ಮಂದಿಗೆ ಉದ್ಯೋಗಾವಕಾಶ ಕಲ್ಪಿಸುವ 13,487 ಕೋಟಿ ರೂಪಾಯಿಗಳ ಒಟ್ಟು 9 ಹೊಸ ಯೋಜನೆಗಳಿಗೆ ಹಾಗೂ ಒಂದು ಹೆಚ್ಚುವರಿ ಬಂಡವಾಳ ಹೂಡಿಕೆ ಯೋಜನೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಅಧ್ಯಕ್ಷತೆಯ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿ ಬುಧವಾರ ಅನುಮೋದನೆ ನೀಡಿದೆ.

ಬುಧವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಸಮಿತಿಯ 56ನೇ ಸಭೆಯಲ್ಲಿ ಮೇಲ್ಕಂಡ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ-3, ಬಳ್ಳಾರಿ-2, ಬೆಂಗಳೂರು ನಗರ, ಚಿತ್ರದುರ್ಗ, ಚಾಮರಾಜನಗರ, ಚಿಕ್ಕಬಳ್ಳಾಪುರ ಹಾಗೂ ಮಂಗಳೂರು ತಲಾ ಒಂದೊಂದು ಸೇರಿದಂತೆ ಒಟ್ಟು 10 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ-3,425 ಕೋಟಿ ರೂ., ಬಳ್ಳಾರಿ-1,204 ಕೋಟಿ ರೂ., ಬೆಂಗಳೂರು ನಗರ-4,042 ಕೋಟಿ ರೂ., ಚಿತ್ರದುರ್ಗ-555 ಕೋಟಿ ರೂ., ಚಾಮರಾಜನಗರ-731 ಕೋಟಿ ರೂ., ಚಿಕ್ಕಬಳ್ಳಾಪುರ-1,000 ಕೋಟಿ ರೂ. ಹಾಗೂ ಮಂಗಳೂರು-2,527 ಕೋಟಿ ರೂ. ಸೇರಿದಂತೆ ಒಟ್ಟು 13,487 ಕೋಟಿ ರೂ.ಗಳ ಯೋಜನೆಗಳಾಗಿವೆ. ಆಮ್ಲಜನಕ, ಸಿಮೆಂಟ್, ಸಿರಾಮಿಕ್, ಪೆಟ್ರೋಲಿಯಂ ಉತ್ಪನ್ನಗಳು, ಇಂಜಿಯರಿಂಗ್ ಟೂಲ್ಸ್, ಸಾಫ್ಟ್ ವೇರ್, ಸೋಲಾರ್ ಸೇರಿದಂತೆ ಇನ್ನಿತರ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆ ಮಾಡಲಾಗುತ್ತಿದೆ ಎಂದು ತಿಳಿಸಲಾಗಿದೆ.

ಸಭೆಯಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಕೃಷಿ ಇಲಾಖೆ ಸಚಿವ ಬಿ.ಸಿ.ಪಾಟೀಲ್, ಕಾರ್ಮಿಕ ಇಲಾಖೆ ಸಚಿವ ಶಿವರಾಂ ಹೆಬ್ಬಾರ್, ರಾಜ್ಯ ಸರಕಾರ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಜ್‍ಕುಮಾರ್ ಖತ್ರಿ, ಕೈಗಾರಿಕಾ ಅಭಿವೃದ್ಧಿ ಆಯುಕ್ತೆ ಗುಂಜನ್ ಕೃಷ್ಣ, ಕೆಐಎಡಿಬಿ ಸಿಇಒ ಶಿವಶಂಕರ್, ಕರ್ನಾಟಕ ಉದ್ಯೋಗ ಮಿತ್ರ ಎಂ.ಡಿ.ರೇವಣ್ಣಗೌಡ ಸೇರಿದಂತೆ ಪ್ರಮುಖ ಅಧಿಕಾರಿಗಳು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News