ಅಮೆರಿಕದ ಇಂಧನ ಪೈಪ್ಲೈನ್ 5ನೇ ದಿನವೂ ಸ್ಥಗಿತ: ಪೆಟ್ರೋಲ್ ಖಾಲಿ; ಮುಗಿಬಿದ್ದು ಖರೀದಿಸುತ್ತಿರುವ ಜನ

Update: 2021-05-12 17:54 GMT

ವಾಶಿಂಗ್ಟನ್, ಮೇ 12: ಸೈಬರ್ ದಾಳಿಯಿಂದಾಗಿ ಅಮೆರಿಕದ ಅತಿ ದೊಡ್ಡ ತೈಲ ಪೈಪ್ಲೈನ್ನ ಕಾರ್ಯನಿರ್ವಹಣೆ ಐದನೇ ದಿನವೂ ಸ್ಥಗಿತವಾಗಿದ್ದು, ಫ್ರೋರಿಡ ರಾಜ್ಯದಿಂದ ವರ್ಜೀನಿಯ ರಾಜ್ಯದವರೆಗಿನ ಪೆಟ್ರೋಲ್ ಪಂಪ್ಗಳಲ್ಲಿನ ಪೆಟ್ರೋಲ್ ವೇಗವಾಗಿ ಬರಿದಾಗುತ್ತಿದೆ. ಹಾಗಾಗಿ, ಈ ಪೆಟ್ರೋಲ್ ಪಂಪ್ಗಳಲ್ಲಿ ತೈಲ ದರ ಮಂಗಳವಾರ ಏರಿಕೆಯಾಗಿದೆ. ಜನರು ಮುಗಿಬಿದ್ದು ಪೆಟ್ರೋಲ್ ಮತ್ತು ಡೀಸೆಲ್ ಖರೀದಿಯಲ್ಲಿ ತೊಡಗಿದ್ದಾರೆ.

ಸೈಬರ್ ದಾಳಿಗೆ ಒಳಗಾಗಿರುವ ಕೊಲೋನಿಯಲ್ ಪೈಪ್ಲೈನ್ ಇನ್ನು ಕೆಲವೇ ದಿನಗಳಲ್ಲಿ ತನ್ನ ಕಾರ್ಯಾಚರಣೆಯನ್ನು ಆರಂಭಿಸಲಿದೆ ಎಂದು ಜೋ ಬೈಡನ್ ಆಡಳಿತ ಭರವಸೆ ನೀಡಿದೆ. ಅಮೆರಿಕದ ಪೂರ್ವ ಕರಾವಳಿಯ ರಾಜ್ಯಗಳ ಇಂಧನ ಬೇಡಿಕೆಯ ಅರ್ಧದಷ್ಟನ್ನು ಕೊಲೋನಿಯಲ್ ಪೈಪ್ಲೈನ್ ಪೂರೈಸುತ್ತದೆ.

ಇಂಧನವನ್ನು ದಾಸ್ತಾನಿಡದಂತೆ ನಾವು ಜನರನ್ನು ಕೇಳಿಕೊಳ್ಳುತ್ತಿದ್ದೇವೆ ಎಂದು ಅಮೆರಿಕ ಇಂಧನ ಕಾರ್ಯದರ್ಶಿ ಜೆನಿಫರ್ ಗ್ರಾನ್ಹೋಮ್ ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು. ಪರಿಸ್ಥಿತಿಯು ಶೀಘ್ರದಲ್ಲೇ ಸಾಮಾನ್ಯ ಸ್ಥಿತಿಗೆ ಬರುತ್ತದೆ ಎಂದರು.

ಸೈಬರ್ ದಾಳಿಕೋರರು ಕೊಲೋನಿಯಲ್ ಪೈಪ್ಲೈನ್ನ ಕಂಪ್ಯೂಟರ್ ವ್ಯವಸ್ಥೆಯ ಮೇಲೆ ರ್ಯಾನ್ಸಮ್ವೇರ್ ದಾಳಿ ನಡೆಸಿದ ಬಳಿಕ ಶುಕ್ರವಾರದಿಂದ ಇಂಧನ ಸಾಗಾಟ ಸ್ಥಗಿತಗೊಂಡಿದೆ. ಸ್ಥಗಿತಗೊಂಡಿರುವ ವ್ಯವಸ್ಥೆಯನ್ನು ಸರಿಪಡಿಸಲು ಸೈಬರ್ ದಾಳಿಕಾರರು ಹಣದ ಬೇಡಿಕೆಯನ್ನು ಇಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News