ಗಾಝಾ ಹಿಂಸೆ: ನಾಳೆ ಐರೋಪ್ಯ ಒಕ್ಕೂಟ ವಿದೇಶ ಸಚಿವರ ತುರ್ತು ಸಮಾವೇಶ

Update: 2021-05-16 18:02 GMT

ಬ್ರಸೆಲ್ಸ್ (ಬೆಲ್ಜಿಯಮ್), ಮೇ 16: ಇಸ್ರೇಲ್ ಮತ್ತು ಫೆಲೆಸ್ತೀನೀಯರ ನಡುವೆ ನಡೆಯುತ್ತಿರುವ ಯುದ್ಧವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಐರೋಪ್ಯ ಒಕ್ಕೂಟದ ವಿದೇಶ ಸಚಿವರು ತುರ್ತು ಆನ್ಲೈನ್ ಮಾತುಕತೆಗಳನ್ನು ನಡೆಸಲಿದ್ದಾರೆ ಎಂದು ಒಕ್ಕೂಟದ ವಿದೇಶ ನೀತಿ ಮುಖ್ಯಸ್ಥ ಜೋಸೆಫ್ ಬೊರೆಲ್ ಹೇಳಿದ್ದಾರೆ.

ಇಸ್ರೇಲ್ ಮತ್ತು ಫೆಲೆಸ್ತೀನೀಯರ ನಡುವೆ ಉಲ್ಬಣಿಸುತ್ತಿರುವ ಸಂಘರ್ಷ ಮತ್ತು ನಾಗರಿಕರ ಸಾವು-ನೋವಿನ ಹಿನ್ನೆಲೆಯಲ್ಲಿ, ನಾನು ಐರೋಪ್ಯ ಒಕ್ಕೂಟ ವಿದೇಶ ಸಚಿವರ ಅಸಾಧಾರಣ ಆನ್ಲೈನ್ ಸಮಾವೇಶವೊಂದನ್ನು ಮಂಗಳವಾರ ಏರ್ಪಡಿಸಿದ್ದೇನೆ. ಈಗ ನಡೆಯುತ್ತಿರುವ ಹಿಂಸೆಯನ್ನು ಕೊನೆಗೊಳಿಸಲು ಐರೋಪ್ಯ ಒಕ್ಕೂಟವು ಯಾವ ರೀತಿಯಲ್ಲಿ ನೆರವಾಗಬಹುದು ಎಂಬ ಬಗ್ಗೆ ನಾವು ಸಮಾವೇಶದಲ್ಲಿ ಚರ್ಚಿಸಲಿದ್ದೇವೆಎಂದು ಅವರು ರವಿವಾರ ಟ್ವಿಟರ್ನಲ್ಲಿ ಬರೆದಿದ್ದಾರೆ.

► ಅಮೆರಿಕದ ವಿವಿಧ ನಗರಗಳಲ್ಲಿ ಇಸ್ರೇಲ್ ದಾಳಿ ವಿರುದ್ಧ ಪ್ರತಿಭಟನೆ

ಲಾಸ್ ಏಂಜಲಿಸ್, ನ್ಯೂಯಾರ್ಕ್, ಬೋಸ್ಟನ್, ಫಿಲಡೆಲ್ಫಿಯ ಸೇರಿದಂತೆ ಅಮೆರಿಕದಾದ್ಯಂತ ವಿವಿಧ ನಗರಗಳಲ್ಲಿ ಸಾವಿರಾರು ಮಂದಿ ಗಾಝಾ ಪಟ್ಟಿಯ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಗಳನ್ನು ವಿರೋಧಿಸಿ ಬೃಹತ್ ಪ್ರತಿಭಟನೆಗಳನ್ನು ನಡೆಸಿದರು. ಫೆಲೆಸ್ತೀನೀಯರ ಮೇಲೆ ಇಸ್ರೇಲ್ ನಡೆಸುತ್ತಿರುವ ಬಾಂಬ್ ದಾಳಿಗಳು ಕೊನೆಗೊಳ್ಳಬೇಕೆಂದು ಅವರು ಒತ್ತಾಯಿಸಿದರು.
  ‌
ಲಾಸ್ ಏಂಜಲಿಸ್ನಲ್ಲಿ ಮೆರವಣಿಗೆ ನಡೆಸಿದ ಪ್ರತಿಭಟನಕಾರರು, ಫೆಲೆಸ್ತೀನನ್ನು ಸ್ವತಂತ್ರಗೊಳಿಸಿಎಂಬುದಾಗಿ ಬರೆದಿರುವ ಫಲಕಗಳನ್ನು ಪ್ರದರ್ಶಿಸಿದರು ಹಾಗೂ ಇಂಟಿಫಾಟ (ಬಂಡಾಯ) ಚಿರಾಯುವಾಗಲಿ ಎಂಬ ಘೋಷಣೆಗಳನ್ನು ಕೂಗಿದರು.
ಅವರು ಪಶ್ಚಿಮ ಲಾಸ್ ಏಂಜಲಿಸ್ನಲ್ಲಿ ಫೆಡರಲ್ ಸರಕಾರದ ಕಚೇರಿಯಿಂದ ಇಸ್ರೇಲ್ ಕೌನ್ಸುಲೇಟ್ವರೆಗೆ ಮೆರವಣಿಗೆ ನಡೆಸಿದರು.

► ನ್ಯೂಝಿಲ್ಯಾಂಡ್ ನಲ್ಲಿ ಇಸ್ರೇಲ್ ದಾಳಿ ವಿರೋಧಿಸಿ ಸಾವಿರಾರು ಜನರಿಂದ ಪ್ರತಿಭಟನೆ

ಗಾಝಾ ಪಟ್ಟಿಯ ಮೇಲೆ ಇಸ್ರೇಲ್ ನಡೆಸುತ್ತಿರುವ ಭೀಕರ ವಾಯು ದಾಳಿಗಳನ್ನು ಪ್ರತಿಭಟಿಸಿ ರವಿವಾರ ಸಾವಿರಾರು ಫೆಲೆಸ್ತೀನ್ ಬೆಂಬಲಿಗರು ನ್ಯೂಝಿಲ್ಯಾಂಡ್ನ ಪ್ರಮುಖ ನಗರಗಳಲ್ಲಿ ಮೆರವಣಿಗೆ ನಡೆಸಿದರು.

ರಾಜಧಾನಿ ವೆಲಿಂಗ್ಟನ್ನಲ್ಲಿ ಘೋಷಣಾ ಫಲಕಗಳು ಮತ್ತು ಪೆಲೆಸ್ತೀನ್ ಧ್ವಜಗಳನ್ನು ಹಿಡಿದುಕೊಂಡ ನೂರಾರು ಮಂದಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಆಕ್ಲಂಡ್ ಮತ್ತು ಕ್ರೈಸ್ಟ್ಚರ್ಚ್ ನಗರಗಳಲ್ಲೂ ಪ್ರತಿಭಟನೆಗಳು ನಡೆದವು.

1948ರಲ್ಲಿ ಇಸ್ರೇಲ್ನ ಸ್ವಾತಂತ್ರ್ಯಕ್ಕಾಗಿ ನಡೆದ ಯುದ್ಧದ ವೇಳೆ ನಿರ್ವಸಿತರಾದ ಲಕ್ಷಾಂತರ ಫೆಲೆಸ್ತೀನೀಯರ ನೆನಪಿನಲ್ಲಿ ಆಚರಿಸಲಾಗುವ ನಕ್ಬಾ ದಿನದ ಸಂದರ್ಭದಲ್ಲೇ ಈ ಪ್ರತಿಭಟನೆಗಳೂ ನಡೆದವು.

► ಅಗತ್ಯವಿರುವಷ್ಟು ಕಾಲ ದಾಳಿ ಮುಂದುವರಿಕೆ: ನೆತನ್ಯಾಹು

ಗಾಝಾ ಪಟ್ಟಿಯ ಮೇಲೆ ನಡೆಸಲಾಗುತ್ತಿರುವ ದಾಳಿಗಳು ಅಗತ್ಯವಿರುವಷ್ಟು ಕಾಲ ಮುಂದುವರಿಯಲಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.
ಅದೇ ವೇಳೆ, ಅಲ್-ಜಝೀರ ಟಿವಿ ಮತ್ತು ಅಸೋಸಿಯೇಟಡ್ ಪ್ರೆಸ್ ಸುದ್ದಿ ಸಂಸ್ಥೆ ಮುಂತಾದ ಮಾಧ್ಯಮ ಗುಂಪುಗಳ ಕಚೇರಿಯಿದ್ದ ಕಟ್ಟಡವನ್ನು ಹಮಾಸ್ ಸೇರಿದಂತೆ ಫೆಲೆಸ್ತೀನ್ ಗುಂಪುಗಳು ಬಳಸುತ್ತಿದ್ದವು ಎಂಬುದಾಗಿಯೂ ಅವರು ಹೇಳಿದರು.
ಈ ಕಟ್ಟಡವನ್ನು ಇಸ್ರೇಲ್ ಸೇನೆ ಶನಿವಾರ ಧ್ವಂಸಗೊಳಿಸಿದೆ.
 
ಗಾಝಾ ಮೇಲಿನ ದಾಳಿಯಲ್ಲಿ ನಾಗರಿಕರ ಸಾವುಗಳು ಸಂಭವಿಸದಂತೆ ಇಸ್ರೇಲ್ ವಿಶೇಷ ಕಾಳಜಿವಹಿಸುತ್ತಿದೆ ಎಂದೂ ಇಸ್ರೇಲ್ ಪ್ರಧಾನಿ ಹೇಳಿಕೊಂಡರು.
ಇಸ್ರೇಲ್ನ ಉದ್ದೇಶಗಳು ಈಡೇರುವವರೆಗೆ ಗಾಝಾದ ಮೇಲಿನ ಇಸ್ರೇಲ್ ದಾಳಿ ಮುಂದುವರಿಯುತ್ತದೆಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನೆತನ್ಯಾಹು ಹೇಳಿದರು. ಅಮೆರಿಕ ಅಧ್ಯಕ್ಷ ನೀಡುತ್ತಿರುವ ಬೆಂಬಲಕ್ಕಾಗಿ ಅವರು ಇದೇ ಸಂದರ್ಭದಲ್ಲಿ ಕೃತಜ್ಞತೆಯನ್ನೂ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News