ಬೈಡನ್ ಸರಕಾರ ಇಸ್ರೇಲ್ ದಾಳಿಯನ್ನು ನಿಭಾಯಿಸುತ್ತಿರುವ ರೀತಿಗೆ ಸ್ವಪಕ್ಷೀಯರಿಂದಲೇ ತರಾಟೆ

Update: 2021-05-16 18:19 GMT

ವಾಶಿಂಗ್ಟನ್, ಮೇ 16: ಗಾಝಾ ಪಟ್ಟಿಯ ಮೇಲೆ ಇಸ್ರೇಲ್ ನಡೆಸುತ್ತಿರುವ ಬಾಂಬ್ ದಾಳಿಗಳು ರವಿವಾರ ಏಳನೇ ದಿನವನ್ನು ಪ್ರವೇಶಿಸಿದಂತೆಯೇ, ಈ ಬಿಕ್ಕಟ್ಟನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ನಿಭಾಯಿಸುತ್ತಿರುವ ರೀತಿಯ ಬಗ್ಗೆ ಅವರ ಡೆಮಾಕ್ರಟಿಕ್ ಪಕ್ಷದಿಂದಲೇ ಅಪಸ್ವರ ಎದ್ದಿದೆ.

ಇಸ್ರೇಲನ್ನು ಸಂತುಷ್ಟಿಪಡಿಸುತ್ತಿರುವುದಕ್ಕಾಗಿ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆಯನ್ನು ನಿರ್ಲಕ್ಷಿಸುತ್ತಿರುವುದಕ್ಕಾಗಿ ಡೆಮಾಕ್ರಟಿಕ್ ಪಕ್ಷದ ಹಲವರು ಬೈಡನ್ ಸರಕಾರವನ್ನು ಟೀಕಿಸಿದ್ದಾರೆ.

ಇಸ್ರೇಲ್ಗೆ ಆತ್ಮರಕ್ಷಣೆ ಮಾಡಿಕೊಳ್ಳುವ ಹಕ್ಕಿದೆ ಎಂಬ ಪುನರಾವರ್ತಿತ ಮಾತುಗಳನ್ನು ಬೈಡನ್ ಬುಧವಾರ ಪುನರುಚ್ಚರಿಸಿದಾಗ ಅಮೆರಿಕ ಸಂಸತ್ನ ಕೆಳಮನೆ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ನಲ್ಲಿ ಅವರದೇ ಪಕ್ಷದ ಪ್ರಗತಿಪರರು ಕಿಡಿಗಾರಿದರು.

ಫೆಲೆಸ್ತೀನೀಯರಿಗೆ ಬದುಕುವ ಹಕ್ಕಿದೆಯೇ? ಎಂಬುದಾಗಿ ನ್ಯೂಯಾರ್ಕ್ ಸಂಸದೆ ಅಲೆಕ್ಸಾಂಡ್ರಿಯ ಒಕಾಶಿಯೊ ಕಾರ್ಟಿರ್ ಗುರುವಾರ ಪ್ರಶ್ನಿಸಿದರು. ಒಂದು ಮಿತ್ರ ದೇಶವನ್ನು ನಿಯಂತ್ರಿಸಲು ಬೈಡನ್ ಆಡಳಿತಕ್ಕೆ ಸಾಧ್ಯವಾಗದಿದ್ದರೆ, ಅದಕ್ಕೆ ಯಾರನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ? ಮಾನವಹಕ್ಕುಗಳ ಪರವಾಗಿ ನಿಲ್ಲುತ್ತೇವೆ ಎಂಬುದಾಗಿ ಅವರು ಹೇಗೆ ಹೇಳಲು ಸಾಧ್ಯ? ಎಂಬುದಾಗಿ ಅವರು ಬಳಿಕ ಟ್ವೀಟ್ ಮಾಡಿದ್ದಾರೆ.
 
ಅಂತರ್ರಾಷ್ಟ್ರೀಯ ಮಾಧ್ಯಮ ಸಂಸ್ಥೆಗಳಿದ್ದ ಕಟ್ಟಡದ ಮೇಲೆ ನಡೆದ ದಾಳಿಗೆ ಮಿಶಿಗನ್ ಸಂಸದೆ ರಶೀದಾ ತ್ಲೈಬ್ ಶನಿವಾರ ಪ್ರತಿಕ್ರಿಯಿಸಿದ್ದಾರೆ. ವರ್ಣಭೇದ ನೀತಿಯ ಮುಖ್ಯಸ್ಥ ನೆತನ್ಯಾಹು ನೇತೃತ್ವದಲ್ಲಿ ಇಸ್ರೇಲ್ ನಡೆಸುತ್ತಿರುವ ಯುದ್ಧಾಪರಾಧಗಳನ್ನು ಜಗತ್ತಿಗೆ ನೋಡಲು ಸಾಧ್ಯವಾಗಬಾರದು ಎನ್ನುವುದಕ್ಕಾಗಿ ಅಂತರ್ರಾಷ್ಟ್ರೀಯ ಮಾಧ್ಯಮ ಕಚೇರಿಗಳಿದ್ದ ಕಟ್ಟಡದ ಮೇಲೆ ಇಸ್ರೇಲ್ ದಾಳಿ ನಡೆಸಿದೆಎಂಬುದಾಗಿ ಅವರು ಟ್ವೀಟ್ ಮಾಡಿದ್ದಾರೆ.
 
ನೆತನ್ಯಾಹು ಸರಕಾರದ ಪರವಾಗಿ ಕ್ಷಮೆ ಕೋರುವ ಪಾತ್ರವನ್ನು ಅಮೆರಿಕ ಕೊನೆಗೊಳಿಸಬೇಕು ಎಂಬುದಾಗಿ ಸೆನೆಟರ್ ಬನಿರ್ರ್ ಸ್ಯಾಂಡರ್ಸ್ ನ್ಯೂಯಾರ್ಕ್ ಟೈಮ್ಸ್ನ ಶುಕ್ರವಾರದ ಸಂಚಿಕೆಯಲ್ಲಿ ಲೇಖನವೊಂದನ್ನು ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News