ಪತ್ರಕರ್ತರ ರಕ್ಷಣೆಗೆ ಹೆಚ್ಚಿನ ಮಹತ್ವದ ಅಗತ್ಯ: ಕೆನಡ ಪ್ರತಿಪಾದನೆ
Update: 2021-05-16 23:59 IST
ಒಟ್ಟಾವ (ಕೆನಡ), ಮೇ 16: ಗಾಝಾದಲ್ಲಿ ಅಂತರ್ರಾಷ್ಟ್ರೀಯ ಮಾಧ್ಯಮ ಸಂಸ್ಥೆಗಳ ಕಚೇರಿಗಳಿದ್ದ ಕಟ್ಟಡವೊಂದನ್ನು ಇಸ್ರೇಲ್ ಧ್ವಂಸಗೊಳಿಸಿರುವ ಹಿನ್ನೆಲೆಯಲ್ಲಿ, ಪತ್ರಕರ್ತರನ್ನು ರಕ್ಷಿಸುವುದಕ್ಕೆ ಹೆಚ್ಚಿನ ಮಹತ್ವ ನೀಡಬೇಕಾದ ಅಗತ್ಯವನ್ನು ಕೆನಡ ಪ್ರತಿಪಾದಿಸಿದೆ ಹಾಗೂ ಗಾಝಾ ಪಟ್ಟಿಯಲ್ಲಿ ನಡೆಯುತ್ತಿರುವ ಹಿಂಸೆಯನ್ನು ಕೊನೆಗೊಳಿಸಲು ತುರ್ತು ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಕರೆ ನೀಡಿದೆ.
ಇಸ್ರೇಲ್, ಪಶ್ಚಿಮ ದಂಡೆ ಮತ್ತು ಗಾಝಾದಲ್ಲಿನ ಪರಿಸ್ಥಿತಿಯನ್ನು ಕೆನಡ ಅತ್ಯಂತ ಕಳವಳದಿಂದ ಗಮನಿಸುತ್ತಿದೆ ಎಂದು ಕೆನಡ ವಿದೇಶ ಸಚಿವ ಮಾರ್ಕ್ ಗಾರ್ನೊ ಹೇಳಿದರು. ಹಿಂಸೆಯನ್ನು ಕೊನೆಗೊಳಿಸಲು, ಉದ್ವಿಗ್ನತೆಯನ್ನು ಶಮನಗೊಳಿಸಲು, ನಾಗರಿಕರು, ನಿರಾಶ್ರಿತರು, ಪತ್ರಕರ್ತರು ಮತ್ತು ಮಾಧ್ಯಮ ಕೆಲಸಗಾರರನ್ನು ರಕ್ಷಿಸಲು ಎಲ್ಲ ಪಕ್ಷಗಳು ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.