ಗಾಝಾ ಮೇಲೆ ಇಸ್ರೇಲ್ ವಾಯುಪಡೆಯಿಂದ ಬಾಂಬ್ ದಾಳಿ: ವಿಕಲಚೇತನ ವ್ಯಕ್ತಿ, ಕುಟುಂಬ ಸದಸ್ಯರ ಸಾವು

Update: 2021-05-20 17:38 GMT

ಡೈರ್ ಎಲ್-ಬಲಾಹ್ (ಫೆಲೆಸ್ತೀನ್), ಮೇ 20: ಇಸ್ರೇಲ್ ಯುದ್ಧವಿಮಾನಗಳು ಬುಧವಾರ ಗಾಝಾದ ಮೇಲೆ ನಡೆಸಿದ ಬಾಂಬ್ ದಾಳಿಯಲ್ಲಿ ಓರ್ವ ವಿಕಲಚೇತನ ವ್ಯಕ್ತಿಯೊಬ್ಬರ ಇಡೀ ಕುಟುಂಬ ಸರ್ವನಾಶವಾಗಿದೆ.

ದಾಳಿ ನಡೆಯುವಾಗ 33 ವರ್ಷದ ಇಯಾದ್ ಸಲೀಹ ತನ್ನ ಮಧ್ಯಾಹ್ನದ ಊಟಕ್ಕಾಗಿ ಕಾಯುತ್ತಿದ್ದರು. ದಾಳಿಯಲ್ಲಿ ಇಯಾದ್ ಸಲೀಹ, ಅವರ ಗರ್ಭಿಣಿ ಪತ್ನಿ ಮತ್ತು ಅವರ ಮೂರು ವರ್ಷದ ಮಗಳು ಮೃತಪಟ್ಟಿದ್ದಾರೆ.

ಮನೆಯ ಚಾವಡಿಯು ನಾಮಾವಶೇಷವಾಗಿದೆ. ಮಗುವಿನ ಕೆಂಪು ಸೈಕಲ್ನ ವಿರೂಪಗೊಂಡ ಭಾಗಗಳು ಚದುರಿ ಬಿದ್ದಿದ್ದವು.

ಮೇ 10ರಿಂದ ನಡೆಯುತ್ತಿರುವ ಇಸ್ರೇಲಿ ವಾಯು ದಾಳಿಗಳಲ್ಲಿ ಈವರೆಗೆ 64 ಮಕ್ಕಳು ಸೇರಿದಂತೆ 227 ಮಂದಿ ಮೃತಪಟ್ಟಿದ್ದಾರೆ ಎಂದು ಗಾಝಾದ ಆರೋಗ್ಯ ಸಚಿವಾಲಯ ತಿಳಿಸಿದೆ.

ಫೆಲೆಸ್ತೀನ್ನ ಸಶಸ್ತ್ರ ಗುಂಪುಗಳು ಇಸ್ರೇಲ್ನತ್ತ ನಡೆಸಿದ ರಾಕೆಟ್ ದಾಳಿಗಳಲ್ಲಿ ಒಂದು ಮಗು ಸೇರಿದಂತೆ 12 ಇಸ್ರೇಲಿಗರು ಪ್ರಾಣ ಕಳೆದುಕೊಂಡಿದ್ದಾರೆ.

ತಾನು ಫೆಲೆಸ್ತೀನ್ ನಾಗರಿಕರ ಮೇಲೆ ದಾಳಿ ನಡೆಸುತ್ತಿಲ್ಲ, ಅಲ್ಲಿನ ಸೇನೆಗೆ ಸಂಬಂಧಿಸಿದ ಗುರಿಗಳ ಮೇಲೆ ಮಾತ್ರ ದಾಳಿ ನಡೆಸುತ್ತಿರುವುದಾಗಿ ಇಸ್ರೇಲ್ ಹೇಳಿಕೊಳ್ಳುತ್ತಿದೆ. ಆದರೆ, ಬುಧವಾರ ವಿಕಲಚೇತನ ವ್ಯಕ್ತಿಯೊಬ್ಬರ ಮನೆಯ ಮೇಲೆ ನಡೆದ ದಾಳಿಯ ಬಗ್ಗೆ ಅದು ವಿವರಣೆ ನೀಡಿಲ್ಲ.
 
ನನ್ನ ಅಣ್ಣನಿಗೆ 14 ವರ್ಷಗಳಿಂದ ನಡೆಯಲು ಸಾಧ್ಯವಾಗುತ್ತಿಲ್ಲ. ಅವರು ಹೋರಾಟಗಾರನೂ ಅಲ್ಲ. ನನ್ನ ಅಣ್ಣ ಏನು ಮಾಡಿದರು? ಅವರು ತನ್ನ ಗಾಲಿಕುರ್ಚಿಯಲ್ಲಿ ಕುಳಿತುಕೊಂಡಿದ್ದರು, ಅಷ್ಟೆ ಎಂದು ಮೃತ ಇಯಾದ್ ರ ತಮ್ಮ ಉಮರ್ ಸಲೀಹ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News