ಜರ್ಮನಿ: 2ನೇ ಮಹಾಯುದ್ಧ ಕಾಲದ 500 ಕೆಜಿ ಬಾಂಬ್ ವಿಲೇವಾರಿ
ಫ್ರಾಂಕ್ಫರ್ಟ್ (ಜರ್ಮನಿ), ಮೇ 20: ಎರಡನೇ ಜಾಗತಿಕ ಯುದ್ಧದಲ್ಲಿ ಬಳಸಲಾದ ಬೃಹತ್ ಬಾಂಬೊಂದು ಜರ್ಮನಿಯ ಆರ್ಥಿಕ ರಾಜಧಾನಿ ಫ್ರಾಂಕ್ಫರ್ಟ್ನಲ್ಲಿ ಪತ್ತೆಯಾಗಿದ್ದು, ಗುರುವಾರ ಮುಂಜಾನೆ ಅದನ್ನು ನಿಯಂತ್ರಿತ ವ್ಯವಸ್ಥೆಯಲ್ಲಿ ಸುರಕ್ಷಿತವಾಗಿ ಸ್ಫೋಟಿಸಲಾಗಿದೆ.
ನಿಯಂತ್ರಿತ ಸ್ಫೋಟದ ವೇಳೆ ಸಾವಿರಾರು ನಿವಾಸಿಗಳನ್ನು ಸ್ಥಳಾಂತರಿಸಲಾಗಿದ್ದು, ಬಳಿಕ ಅವರು ತಮ್ಮ ಮನೆಗಳಿಗೆ ಮರಳಿದ್ದಾರೆ.
ನಗರದ ಜನನಿಬಿಡ ನೋರ್ಡೆಂಡ್ ಪ್ರದೇಶದಲ್ಲಿ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದಾಗ ಬುಧವಾರ 500 ಕಿಲೋಗ್ರಾಮ್ ತೂಕದ ಸ್ಫೋಟಿಸದ ಬಾಂಬ್ ಪತ್ತೆಯಾಗಿತ್ತು. ಈ ಪ್ರದೇಶದಿಂದ ಬಾಂಬ್ ಹೊರದೆಗೆಯುವುದು ಸವಾಲಿನ ಕೆಲಸವಾಗಿತ್ತು ಎಂದು ಅಗ್ನಿಶಾಮಕ ಸಿಬ್ಬಂದಿ ಹೇಳಿದ್ದಾರೆ.
ಮಕ್ಕಳ ಆಟದ ಮೈದಾನದ ಪಕ್ಕದಲ್ಲೇ 2 ಮೀಟರ್ ಆಳದಲ್ಲಿ ಬಾಂಬ್ ಪತ್ತೆಯಾಯಿತು ಎಂದು ಫ್ರಾಂಕ್ಫರ್ಟರ್ ಆಲ್ಜೆಮಿನಿ ಪತ್ರಿಕೆ ವರದಿ ಮಾಡಿದೆ.
ಬುಧವಾರ ಮಧ್ಯರಾತ್ರಿಯ ಸ್ವಲ್ಪವೇ ಹೊತ್ತಿನ ಬಳಿಕ ಬಾಂಬನ್ನು ನಿಯಂತ್ರಿತ ವ್ಯವಸ್ಥೆಯಲ್ಲಿ ಸ್ಫೋಟಿಸಲಾಯಿತು. ಸ್ಫೋಟದಿಂದಾಗಿ 3 ಮೀಟರ್ ಆಳ ಮತ್ತು 10 ಮೀಟರ್ ಅಗಲದ ಹೊಂಡ ಸೃಷ್ಟಿಯಾಗಿದೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ.
ಸಮೀಪದ ಆಸ್ಪತ್ರೆಯ ರೋಗಿಗಳು ಮತ್ತು ಸಿಬ್ಬಂದಿ ಸೇರಿದಂತೆ ಸುಮಾರು 25,000 ನಿವಾಸಿಗಳನ್ನು ತೆರವುಗೊಳಿಸಲಾಗಿತ್ತು.