ಸ್ವತಂತ್ರ ಫೆಲೆಸ್ತೀನ್ ದೇಶಕ್ಕೆ ಜಗತ್ತಿನಾದ್ಯಂತ ಬೆಂಬಲ: ನ್ಯೂಯಾರ್ಕ್‌ ಸೇರಿದಂತೆ ಹಲವು ನಗರಗಳಲ್ಲಿ ಪ್ರತಿಭಟನೆ

Update: 2021-05-23 18:29 GMT

ಬರ್ಲಿನ್ (ಜರ್ಮನಿ), ಮೇ 23: ಫೆಲೆಸ್ತೀನ್ ನ ಸ್ವತಂತ್ರ ದೇಶದ ಬೇಡಿಕೆಗೆ ಬೆಂಬಲ ವ್ಯಕ್ತಪಡಿಸಿ ಶನಿವಾರವೂ ಜಗತ್ತಿನಾದ್ಯಂತ ಪ್ರತಿಭಟನೆಗಳು ನಡೆದವು. ಇಸ್ರೇಲ್ಗೆ ಶಸ್ತ್ರಾಸ್ತ್ರಗಳ ಪೂರೈಕೆಯನ್ನು ನಿಲ್ಲಿಸಲು ಸಾಧ್ಯವಾಗುವಂತೆ ಆ ದೇಶದ ವಿರುದ್ಧ ದಿಗ್ಬಂಧನಗಳು ಮತ್ತು ಸೇನಾ ನಿರ್ಬಂಧಗಳನ್ನು ವಿಧಿಸಬೇಕೆಂದು ಪ್ರತಿಭಟನಕಾರರು ತಮ್ಮ ತಮ್ಮ ಸರಕಾರಗಳನ್ನು ಒತ್ತಾಯಿಸಿದರು.

ಬರ್ಲಿನ್, ಮೆಲ್ಬರ್ನ್, ಲಂಡನ್ ಮತ್ತು ಪ್ಯಾರಿಸ್ಗಳಲ್ಲಿ ಪ್ರತಿಭಟನೆಗಳು ನಡೆದವು. ನ್ಯೂಯಾರ್ಕ್ ಸೇರಿದಂತೆ ಇತರ ಬೃಹತ್ ನಗರಗಳಲ್ಲಿ ವಾರಾಂತ್ಯದಲ್ಲಿ ಪ್ರತಿಭಟನೆಗಳು ನಿಗದಿಯಾಗಿವೆ.

ಇಂಥ ಮಹತ್ವದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿರುವುದಕ್ಕೆ ನನಗೆ ಹೆಮ್ಮೆಯೆನಿಸುತ್ತದೆ ಎಂದು ಲಂಡನ್ನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ ಅಮಲ್ ನಗ್ವಿ ಎಂಬವರು ಅಲ್-ಜಝೀರದೊಂದಿಗೆ ಮಾತನಾಡುತ್ತಾ ಹೇಳಿದರು. ಇದರಿಂದ ಏನೂ ಪ್ರಯೋಜನವಿಲ್ಲ ಎಂದು ಬಹಳಷ್ಟು ಜನ ತಿಳಿದಿದ್ದಾರೆ. ನಾವು ಮೆರವಣಿಗೆಯಲ್ಲಿ ಸಾಗಿ ಬೊಬ್ಬೆ ಹೊಡೆಯುತ್ತೇವೆ, ಅಷ್ಟೆ ಎಂದು ಅವರು ಭಾವಿಸಿದ್ದಾರೆ. ಆದರೆ, ಪರಿಸ್ಥಿತಿ ಬದಲಾಗಿದೆ. ಆ ಬದಲಾವಣೆ ಕಾರ್ಯರೂಪಕ್ಕೆ ಬರುವವರೆಗೆ ಸ್ವತಂತ್ರ ಫೆಲೆಸ್ತೀನ್ ದೇಶವನ್ನು ನೋಡುವವರೆಗೆ ನಾವು ವಿರಮಿಸುವುದಿಲ್ಲ ಎಂದು ಅವರು ಹೇಳುತ್ತಾರೆ.

ಯಹೂದಿಗಳು ಮತ್ತು ಅರಬ್ಬರು ಜೊತೆಯಾಗಿ ಬದುಕಬೇಕೆಂದು ಒತ್ತಾಯಿಸಿ ಸಾವಿರಾರು ಮಂದಿ ಇಸ್ರೇಲ್ನ ಟೆಲ್ ಅವೀವ್ ನಗರದಲ್ಲೂ ಪ್ರದರ್ಶನ ನಡೆಸಿದ್ದಾರೆ. ಇಸ್ರೇಲಿಗರು ಮತ್ತು ಫೆಲೆಸ್ತೀನೀಯರು ಶಾಂತಿಯಿಂದ ಇರಬೇಕೆಂದು ಆಗ್ರಹಿಸಿ ಈಗಾಗಲೇ ಇಸ್ರೇಲ್ನಾದ್ಯಂತ ಹಲವಾರು ಧರಣಿಗಳು ನಡೆದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News