×
Ad

ಬ್ರಿಟನ್: ‘ಆಲ್ಫಾ’ ವನ್ನು ಹಿಂದಿಕ್ಕುತ್ತಿರುವ ‘ಡೆಲ್ಟಾ’ ಕೊರೋನ ವೈರಸ್ ಪ್ರಭೇದ

Update: 2021-06-04 23:58 IST

ಲಂಡನ್, ಜೂ. 4: ಭಾರತದಲ್ಲಿ ಮೊದಲು ಪತ್ತೆಯಾಗಿರುವ ಕೊರೋನ ವೈರಸ್‌ನ ಡೆಲ್ಟಾ ಪ್ರಭೇದವು ಈಗ ಬ್ರಿಟನ್‌ನಲ್ಲಿ ವರದಿಯಾಗುತ್ತಿರುವ ಹೆಚ್ಚಿನ ಕೊರೋನ ವೈರಸ್ ಸೋಂಕು ಪ್ರಕರಣಗಳಿಗೆ ಕಾರಣವಾಗಿದೆ ಎಂದು ದೇಶದ ವಿಜ್ಞಾನಿಗಳು ಹೇಳಿದ್ದಾರೆ. ಇದು ಹಿಂದೆಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಸೋಂಕಿತರನ್ನು ಆಸ್ಪತ್ರೆಗೆ ಕಳುಹಿಸಬಹುದು ಎಂಬ ಆತಂಕವನ್ನು ಅವರು ವ್ಯಕ್ತಪಡಿಸಿದ್ದಾರೆ.

ಕೊರೋನ ವೈರಸ್‌ನ ಡೆಲ್ಟಾ ಪ್ರಭೇದವು ಇಂಗ್ಲೆಂಡ್‌ನ ಕೆಂಟ್‌ನಲ್ಲಿ ಮೊದಲು ಪತ್ತೆಯಾದ ಪ್ರಭೇದ ‘ಆಲ್ಫಾ’ವನ್ನು ಹಿಂದಿಕ್ಕಿದೆ ಎಂಬುದಾಗಿ ತಜ್ಞರು ಭಾವಿಸಿದ್ದಾರೆ ಎಂದು ಬ್ರಿಟನ್‌ನ ಪಬ್ಲಿಕ್ ಹೆಲ್ತ್ ಇಂಗ್ಲೆಂಡ್ (ಪಿಎಚ್‌ಇ) ತಿಳಿಸಿದೆ. ದೇಶದ ಹಲವಾರು ಭಾಗಗಳಲ್ಲಿ ಈ ಪ್ರಭೇದದ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ ಎಂಬುದಾಗಿಯೂ ಅದು ಹೇಳಿದೆ.

‘‘ಆಲ್ಫಾ ಪ್ರಭೇದಕ್ಕೆ ಹೋಲಿಸಿದರೆ, ಡೆಲ್ಟಾ ಪ್ರಭೇದದ ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚಿದೆ ಎನ್ನುವುದನ್ನು ಆರಂಭಿಕ ಅಂಕಿಅಂಶಗಳು ಸೂಚಿಸಿವೆ’’ ಎಂದು ಪಿಎಚ್‌ಇ ತಿಳಿಸಿದೆ. ಆದರೆ, ಈ ಅಭಿಪ್ರಾಯವನ್ನು ದೃಢೀಕರಿಸಲು ಹೆಚ್ಚಿನ ಅಂಕಿಅಂಶಗಳ ಅಗತ್ಯವಿದೆ ಎಂದಿದೆ.

ಆಸ್ಟ್ರೇಲಿಯದಲ್ಲೂ ಮೊದಲ ಡೆಲ್ಟಾ ಪ್ರಭೇದ ಪ್ರಕರಣಗಳು ಪತ್ತೆ

ಆಸ್ಟ್ರೇಲಿಯದಲ್ಲಿ ಮೊದಲ ಬಾರಿಗೆ ಕೊರೋನ ವೈರಸ್‌ನ ಡೆಲ್ಟಾ ಪ್ರಭೇದವು ಮೆಲ್ಬರ್ನ್‌ನಲ್ಲಿ ಪತ್ತೆಯಾಗಿದೆ ಎಂದು ಆಸ್ಟ್ರೇಲಿಯದ ವಿಕ್ಟೋರಿಯ ರಾಜ್ಯದ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ಇದು ಕೊರೋನ ವೈರಸ್ ಸೋಂಕು ಪ್ರಕರಣಗಳ ತೀವ್ರ ಹೆಚ್ಚಳಕ್ಕೆ ಕಾರಣವಾಗಬಹುದು ಎಂಬು ಕಳವಳವನ್ನು ಹುಟ್ಟುಹಾಕಿದೆ.

ಈ ಪ್ರಭೇದವು ಹೆಚ್ಚು ಸುಲಭವಾಗಿ ಹರಡುತ್ತದೆ ಹಾಗೂ ಭಾರತದ ಇತ್ತೀಚಿನ ವಿನಾಶಕಾರಿ ಸಾಂಕ್ರಾಮಿಕ ಪರಿಸ್ಥಿತಿಗೆ ಇದೇ ಕಾರಣವಾಗಿತ್ತು. ಜಗತ್ತಿನಲ್ಲಿ ಈಗ ಚಾಲ್ತಿಯಲ್ಲಿರುವ ನಾಲ್ಕು ಮಾರಕ ಕೋವಿಡ್-19 ಪ್ರಭೇದಗಳ ಪೈಕಿ ಇದೂ ಒಂದಾಗಿದೆ ಎಂಬುದಾಗಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ವರ್ಗೀಕರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News