ಕೊಲೋನಿಯಲ್ ಪೈಪ್ಲೈನ್ ಪಾವತಿಸಿದ ಅರ್ಧಕ್ಕೂ ಹೆಚ್ಚು ಹಣ ಕನ್ನಗಾರರಿಂದ ವಶಪಡಿಸಿದ್ದೇವೆ: ಅಮೆರಿಕ

Update: 2021-06-09 16:43 GMT
photo : twitter (@GoodvibrasCom)

ವಾಶಿಂಗ್ಟನ್, ಜೂ. 8: ರಶ್ಯದಲ್ಲಿರುವ ರ್ಯಾ‌ನ್ಸಮ್ವೇರ್ ಕನ್ನಗಾರ ಡಾರ್ಕ್ ಸೈಡ್‌ ಗೆ ಕೊಲೋನಿಯಲ್ ಪೈಪ್ಲೈನ್ ಪಾವತಿಸಿರುವ 4.4 ಮಿಲಿಯ ಡಾಲರ್ (ಸುಮಾರು 32 ಕೋಟಿ ರೂಪಾಯಿ) ಒತ್ತೆಹಣದ ಪೈಕಿ ಅರ್ಧಕ್ಕೂ ಹೆಚ್ಚನ್ನು ವಶಪಡಿಸಿಕೊಂಡಿರುವುದಾಗಿ ಅಮೆರಿಕದ ಕಾನೂನು ಇಲಾಖೆ ಸೋಮವಾರ ತಿಳಿಸಿದೆ.

ಡಾರ್ಕ್ ಸೈಡ್ ಅಮೆರಿಕದ ಬೃಹತ್ ಕೊಲೋನಿಯಲ್ ತೈಲ ಪೈಪ್ಲೈನ್ ನ ಕಂಪ್ಯೂಟರ್ ವ್ಯವಸ್ಥೆಯ ಮೇಲೆ ಸೈಬರ್ ದಾಳಿ ನಡೆಸಿ ಅದರ ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿತ್ತು. ಹಾಗೂ ಅದನ್ನು ಸರಿಪಡಿಸಲು ಹಣದ ಬೇಡಿಕೆಯನ್ನು ಮುಂದಿಟ್ಟಿತ್ತು.

‘‘ಇಂದು ನಾವೇ ಡಾರ್ಕ್‌ ಸೈಡ್‌ ನ ಸಂಪೂರ್ಣ ವ್ಯವಸ್ಥೆಗೆ ಕನ್ನ ಹಾಕಿದ್ದೇವೆ. ಒತ್ತೆಹಣಕ್ಕಾಗಿ ರ್ಯಾನ್ಸಮ್ವೇರ್ ದಾಳಿ ನಡೆಸುವ ಮತ್ತು ಡಿಜಿಟಲ್ ದಾಳಿಗಳನ್ನು ನಡೆಸುವ ಅದರ ಇಡೀ ವ್ಯವಸ್ಥೆಯನ್ನು ನಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದೇವೆ. ಡಿಜಿಟಲ್ ಕರೆನ್ಸಿ ಮೂಲಕ ಅದು ಅಕ್ರಮವಾಗಿ ಗಳಿಸಿರುವ ಹಣವನ್ನೂ ನಮ್ಮ ನಿಯಂತ್ರಣಕ್ಕೆ ಪಡೆದುಕೊಂಡಿದ್ದೇವೆ’’ ಎಂದು ಉಪ ಅಟಾರ್ನಿ ಜನರಲ್ ಲೀಸಾ ಮೊನಾಕೊ ಹೇಳಿದರು.

ಪೂರ್ವ ಅಮೆರಿಕಕ್ಕೆ ತೈಲ ಪೂರೈಕೆ ಮಾಡುವ 8,850 ಕಿಲೋಮೀಟರ್ ಉದ್ದದ ಪೈಪ್ಲೈನ್ ನ ಕಂಪ್ಯೂಟರ್ ವ್ಯವಸ್ಥೆಯ ಮೇಲೆ ದಾಳಿ ನಡೆದ ಒಂದು ತಿಂಗಳ ಬಳಿಕ ಈ ಪ್ರತೀಕಾರ ಸಂಭವಿಸಿದೆ.

ಕೊಲೋನಿಯಲ್ ಪೈಪ್ಲೈನ್ ಪಾವತಿಸಿದ್ದ 75 ಬಿಟ್ಕಾಯಿನ್ ಗಳನ್ನು ಪತ್ತೆಹಚ್ಚುವಲ್ಲಿ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ ಯಶಸ್ವಿಯಾಗಿದೆ ಎಂದು ಕಾನೂನು ಇಲಾಖೆ ತಿಳಿಸಿದೆ. ಆ ಪೈಕಿ 63.7 ಬಿಟ್ ಕಾಯಿನ್ ಗಳನ್ನು ವಶಕ್ಕೆ ತೆಗೆದುಕೊಳ್ಳಲು ಸಾಧ್ಯವಾಗಿದೆ. ಒಂದು ತಿಂಗಳ ಹಿಂದೆ 75 ಬಿಟ್ಕಾಯಿನ್ಗಳ ಬೆಲೆ 4.4 ಮಿಲಿಯ ಡಾಲರ್ ಆಗಿತ್ತು. ಈಗ ಅದರ ಮೌಲ್ಯ ಕುಸಿದಿದೆ. ಹಾಗಾಗಿ ವಶಪಡಿಸಿಕೊಳ್ಳಲಾಗಿರುವ 63.7 ಬಿಟ್ ಕಾಯಿನ್ಗಳ ಮೌಲ್ಯ ಈಗ 2.3 ಮಿಲಿಯ ಡಾಲರ್ (ಸುಮಾರು 16.78 ಕೋಟಿ ರೂಪಾಯಿ) ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News