ರಶ್ಯದಿಂದ ಇರಾನ್ ಗೆ ಆಧುನಿಕ ಉಪಗ್ರಹ ಪೂರೈಕೆ : ‘ವಾಶಿಂಗ್ಟನ್ ಪೋಸ್ಟ್’ ವರದಿ

Update: 2021-06-11 17:58 GMT

ವಾಶಿಂಗ್ಟನ್, ಜೂ. 11: ಇರಾನ್ಗೆ ಸುಧಾರಿತ ಉಪಗ್ರಹವೊಂದನ್ನು ನೀಡಲು ರಶ್ಯ ಸಿದ್ಧತೆಗಳನ್ನು ನಡೆಸುತ್ತಿದೆ ಎಂದು ಅಮೆರಿಕದ ‘ವಾಶಿಂಗ್ಟನ್ ಪೋಸ್ಟ್’ ಪತ್ರಿಕೆ ಗುರುವಾರ ವರದಿ ಮಾಡಿದೆ. ಈ ಉಪಗ್ರಹದ ಮೂಲಕ ಮಧ್ಯ ಪ್ರಾಚ್ಯದಾದ್ಯಂತದ ಸೇನಾ ಗುರಿಗಳನ್ನು ಪತ್ತೆಹಚ್ಚಲು ಇರಾನ್ ಗೆ ಸಾಧ್ಯವಾಗಲಿದೆ ಎಂದು ಪತ್ರಿಕೆ ಹೇಳಿದೆ.

ಈ ಯೋಜನೆಯ ಪ್ರಕಾರ, ಅತ್ಯುನ್ನತ ಸಾಮರ್ಥ್ಯದ ಕ್ಯಾಮರಗಳನ್ನು ಹೊಂದಿರುವ ರಶ್ಯ ನಿರ್ಮಿತ ಕನೊಪುಸ್-ವಿ ಉಪಗ್ರಹವನ್ನು ಇರಾನ್ ಗೆ ನೀಡಲಾಗುವುದು. ಅದೂ ಅಲ್ಲದೆ, ಉಪಗ್ರಹವನ್ನು ಕೆಲವೇ ತಿಂಗಳುಗಳಲ್ಲಿ ರಶ್ಯದಿಂದ ಉಡಾಯಿಸಲು ಸಿದ್ಧತೆಗಳನ್ನು ನಡೆಸಲಾಗುತ್ತಿದೆ ಎಂದು ಅದು ಹೇಳಿದೆ.

ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜಿನೀವದಲ್ಲಿ ಭೇಟಿಯಾಗುವ ದಿನಗಳ ಮೊದಲು ಹಾಗೂ 2015ರ ಇರಾನ್ ಪರಮಾಣು ಒಪ್ಪಂದವನ್ನು ಉಳಿಸುವ ನಿಟ್ಟಿನಲ್ಲಿ ಅಮೆರಿಕ ಮತ್ತು ಇರಾನ್  ಪರೋಕ್ಷ ಮಾತುಕತೆ ನಡೆಸುತ್ತಿರುವ ಸಮಯದಲ್ಲಿ ಈ ವರದಿ ಪ್ರಕಟಗೊಂಡಿದೆ.

ಈ ಉಪಗ್ರಹದ ಮೂಲಕ ಪರ್ಸಿಯನ್ ಕೊಲ್ಲಿಯಲ್ಲಿರುವ ತೈಲ ಶುದ್ಧೀಕರಣ ಘಟಕಗಳಿಂದ ಹಿಡಿದು ಇಸ್ರೇಲ್ ನ ಸೇನಾ ನೆಲೆಗಳು ಮತ್ತು ಇರಾಕ್ ನಲ್ಲಿ ಅಮೆರಿಕದ ಸೈನಿಕರಿರುವ ಬರಾಕ್ ಗಳವರೆಗೆ ನಿರಂತರ ಕಣ್ಗಾವಲು ನಡೆಸಲು ಇರಾನ್ ಗೆ ಸಾಧ್ಯವಾಗುತ್ತದೆ ಎಂದು ಮೂರು ಮೂಲಗಳನ್ನು ಉಲ್ಲೇಖಿಸಿ ಪತ್ರಿಕೆ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News