ಅಫ್ಘಾನ್ ನಿಂದ ಹೊರಹೋದ ಬಳಿಕ ಅಮೆರಿಕ ಟರ್ಕಿಯನ್ನು ಅವಲಂಬಿಸಬಹುದು: ಟರ್ಕಿ ಅಧ್ಯಕ್ಷ ಎರ್ದೊಗಾನ್

Update: 2021-06-13 17:19 GMT

ಇಸ್ತಾಂಬುಲ್ (ಟರ್ಕಿ), ಜೂ. 13: ಅಫ್ಘಾನಿಸ್ತಾನದಿಂದ ಅಮೆರಿಕದ ಸೈನಿಕರು ಹೊರಹೋದ ಬಳಿಕ, ಟರ್ಕಿಯು ಆ ದೇಶದಲ್ಲಿ ಉಳಿಯುವ ‘ಏಕೈಕ ನಂಬಿಕಸ್ತ’ ದೇಶವಾಗಿರುತ್ತದೆ ಎಂದು ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೊಗಾನ್ ರವಿವಾರ ಹೇಳಿದ್ದಾರೆ. ಆ ಮೂಲಕ ಅಮೆರಿಕವು ತನ್ನ ನ್ಯಾಟೊ ಮಿತ್ರ ದೇಶವಾಗಿರುವ ಟರ್ಕಿಯನ್ನು ಅವಲಂಬಿಸಬಹುದಾಗಿದೆ ಎಂಬ ಇಂಗಿತವನ್ನು ಅವರು ವ್ಯಕ್ತಪಡಿಸಿದ್ದಾರೆ.

ಬ್ರಸೆಲ್ಸ್ ನಲ್ಲಿ ಸೋಮವಾರ ನಡೆಯಲಿರುವ ನ್ಯಾಟೋ ಶೃಂಗ ಸಮ್ಮೇಳನದ ನೇಪಥ್ಯದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ರನ್ನು ತಾನು ಮುಖಾಮುಖಿ ಭೇಟಿಯಾದಾಗ ಈ ವಿಷಯದ ಬಗ್ಗೆ ಅವರೊಂದಿಗೆ ಚರ್ಚೆ ನಡೆಸುವುದಾಗಿ ಎರ್ದೊಗಾನ್ ಹೇಳಿದ್ದಾರೆ. ಅಮೆರಿಕ ಮತ್ತು ಟರ್ಕಿ ದೇಶಗಳ ನಡುವಿನ ಸಂಬಂಧ ಈಗ ತಳಮಟ್ಟದಲ್ಲಿದೆ.

‘‘ಅಫ್ಘಾನಿಸ್ತಾನದಿಂದ ಶೀಘ್ರವೇ ಹೊರಹೋಗಲು ಅಮೆರಿಕ ಸಿದ್ಧತೆಗಳನ್ನು ನಡೆಸುತ್ತಿದೆ. ಅವರು ಹೊರಹೋದ ತಕ್ಷಣದಿಂದ ಆ ದೇಶದಲ್ಲಿ ಉಳಿಯುವ ಏಕೈಕ ನಂಬಿಕಸ್ತ ದೇಶ ಟರ್ಕಿಯಾಗಿರುತ್ತದೆ’’ ಎಂದು ಬ್ರಸೆಲ್ಸ್ ಗೆ ಹೊರಡುವ ಮುನ್ನ ರವಿವಾರ ಇಸ್ತಾಂಬುಲ್ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎರ್ದೊಗಾನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News