ನೇಪಾಳದಲ್ಲಿ ಧಾರಾಕಾರ ಮಳೆ : 16 ಮಂದಿ ಮೃತ್ಯು, 22 ಮಂದಿ ನಾಪತ್ತೆ

Update: 2021-06-19 17:58 GMT

ಕಠ್ಮಂಡು, ಜೂ.19: ಕಳೆದ ರವಿವಾರದಿಂದ ನೇಪಾಳದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ದೇಶದ ಹಲವೆಡೆ ಪ್ರವಾಹ ಸ್ಥಿತಿ ಹಾಗೂ ಭೂಕುಸಿತ ದುರಂತ ಸಂಭವಿಸಿದ್ದು 3 ವಿದೇಶೀಯರ ಸಹಿತ ಕನಿಷ್ಟ 16 ಮಂದಿ ಸಾವನ್ನಪ್ಪಿದ್ದಾರೆ. 22 ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ ಎಂದು ನೇಪಾಲದ ಗೃಹ ವ್ಯವಹಾರ ಸಚಿವಾಲಯ ಹೇಳಿದೆ. 

ಮನೆ ಮತ್ತು ಆಸ್ತಿ ಹಾನಿಯ ಕುರಿತ ವಿವರ ಇನ್ನಷ್ಟೇ ಬರಬೇಕಿದೆ. ಈಗ ಶೋಧನೆ, ರಕ್ಷಣೆ ಮತ್ತು ಪರಿಹಾರ ಸಾಮಾಗ್ರಿ ವಿತರಣೆಯತ್ತ ಸರಕಾರ ಗಮನ ಹರಿಸಿದೆ. ರವಿವಾರದಿಂದ ಶನಿವಾರ(ಜೂ.19)ದ ವರೆಗಿನ ಅವಧಿಯಲ್ಲಿ 16 ಮಂದಿ ಸಾವನ್ನಪ್ಪಿದ್ದು 11 ಮಂದಿ ಗಾಯಗೊಂಡಿದ್ದಾರೆ. 22 ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ ಎಂದು ಗೃಹ ಇಲಾಖೆಯ ವಕ್ತಾರ ಜನಕ್ರಾಜ್ ದಹಾಲ್ ಹೇಳಿದ್ದಾರೆ. 

ಸಿಂಧುಪಾಲ್ ಚೋಕ್ ಮತ್ತು ಮನಾಂಗ್ ಜಿಲ್ಲೆಯಲ್ಲಿ ಅತೀ ಹೆಚ್ಚು ಆಸ್ತಿ ಮತ್ತು ಪ್ರಾಣಹಾನಿ ಸಂಭವಿಸಿದೆ. ಲಮ್ಜುಂಗ್, ಮ್ಯಾಗ್ಡಿ, ಮಸ್ತಂಗ್, ಮನಂಗ್, ಪಾಲ್ಪ, ಕಾಲಿಕೋಟ್, ಜುಮ್ಲ, ದೈಲೇಖ್, ಬಜೂರಾ, ಸಿಂಧುಪಾಲ್ ಚೋಕ್ ಮತ್ತು ಬಜಂಗ್ ಜಿಲ್ಲೆಯಲ್ಲಿ ನೆರೆ ಮತ್ತು ಭೂಕುಸಿತದ ಪ್ರಕರಣ ವರದಿಯಾಗಿದೆ. ದೇಶದೆಲ್ಲೆಡೆ ಮಳೆ ಸುರಿಯುತ್ತಿದ್ದು ಹಲವು ಜಿಲ್ಲಾಡಳಿತಗಳು ಜನತೆಗೆ ಮುನ್ನೆಚ್ಚರಿಕೆ ನೀಡುವ ಪ್ರಕಟಣೆ ಜಾರಿಗೊಳಿಸಿವೆ. ತಮಕೋಶಿ ನದಿ ಉಕ್ಕೇರಿ ಹರಿಯುತ್ತಿದ್ದು ಪ್ರವಾಹ ಸಂಭವಿಸುವ ಬಗ್ಗೆ ನದಿಪಾತ್ರದ ಡೋಲಖ ಜಿಲ್ಲೆಯ ಜನರಿಗೆ ಎಚ್ಚರಿಕೆ ನೀಡಲಾಗಿದೆ. ನೇಪಾಳ-ಚೀನಾ ಗಡಿಭಾಗದ ರೊಂಗ್ಶಿಯ ಗ್ರಾಮದಲ್ಲಿ ಭಾರೀ ಮಳೆ ಸುರಿಯುತ್ತಿರುವುದರಿಂದ ತಮಕೋಶಿ ನದಿಯಲ್ಲಿ ಹಠಾತ್ ಪ್ರವಾಹ ಸಂಭವಿಸುವ ಸಾಧ್ಯತೆಯಿದೆ. ಆದ್ದರಿಂದ ಈ ಪ್ರದೇಶದಲ್ಲಿ ವಾಸಿಸುತ್ತಿರುವವರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಡೋಲಖ ಜಿಲ್ಲಾಡಳಿತ ಸೂಚಿಸಿದೆ.

ನೇಪಾಳ ಹಾಗೂ ಇತರ ದಕ್ಷಿಣ ಏಶ್ಯಾ ದೇಶಗಳಲ್ಲಿ ಈ ಬಾರಿ ಸಾಮಾನ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮುಂಗಾರು ಮಳೆ ಸುರಿಯಲಿದೆ ಎಂದು ನೇಪಾಳದ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News