ಡೆಲ್ಟಾ ಪ್ರಭೇದದ ಕೋವಿಡ್ ಅಟ್ಟಹಾಸ: ಬಾಂಗ್ಲಾದಲ್ಲಿ ಮತ್ತೆ ಲಾಕ್ ಡೌನ್

Update: 2021-06-26 17:53 GMT

ಢಾಕಾ,ಜೂ.26: ಡೆಲ್ಟಾ ಪ್ರಭೇದದ ಕೊರೋನ ವೈರಸ್ನ ಪ್ರಕರಣಗಳು ಅಪಾಯಕಾರಿ ಮಟ್ಟದಲ್ಲಿ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಬಾಂಗ್ಲಾದೇಶ ಸರಕಾರವು ಸೋಮ ವಾರದಿಂದ ಒಂದು ವಾರಗಳ ಕಟ್ಟುನಿಟ್ಟಿನ  ಲಾಕ್ ಡೌನ್  ಘೋಷಿಸಿದೆ. ದೇಶಾದ್ಯಂತ ಎಲ್ಲಾ ಸರಕಾರಿ ಹಾಗೂ ಖಾಸಗಿ ಕಚೇರಿಗಳು ಒಂದು ವಾರದವರೆಗೆ ಸಂಪೂರ್ಣವಾಗಿ ಮುಚ್ಚುಗಡೆಯಾಗಲಿದೆ ಹಾಗೂ ಕೇವಲ ವೈದ್ಯಕೀಯ ಸೇವೆಗಳಿಗೆ ಸಂಬಂಧಿಸಿದ ಸಾರಿಗೆಗೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗುವುದು ಎಂದು ಬಾಂಗ್ಲಾ ಸರಕಾರು ತಿಳಿಸಿದೆ. ತುರ್ತುಸನ್ನಿವೇಶಗಳನ್ನು ಹೊರತುಪಡಿಸಿ ಯಾರೂ ಕೂಡಾ ಮನೆಯಿಂದ ಹೊರಬರುವಂತಿಲ್ಲವೆಂದು ಎಚ್ಚರಿಕೆ ನೀಡಿದೆ.

‌ ಲಾಕ್ ಡೌನ್ ನ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಪೊಲೀಸರು ಹಾಗೂ ಗಡಿಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ಅಲ್ಲದೆ ಅಗತ್ಯಬಿದ್ದಲ್ಲಿ ಸೇನಾ ಸಿಬ್ಬಂದಿಯನ್ನು ಕೂಡಾ ಬಳಸಿಕೊಳ್ಳಲಾಗುವುದು ಎಂದು ಬಾಂಗ್ಲಾ ಆರೋಗ್ಯ ಇಲಾಖೆಯ ವಕ್ತಾರ ರೊಬೆದ್ ಅಮಿನ್ ತಿಳಿಸಿದ್ದಾರೆ.
  
17 ಕೋಟಿಗೂ ಅಧಿಕ ಜನಸಂಖ್ಯೆಯಿರುವ ಬಾಂಗ್ಲಾದೇಶದಲ್ಲಿ ಮೇ ತಿಂಗಳ ಮಧ್ಯದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆಯಲ್ಲಿ ನಿರಂತರ ಏರಿಕೆಯಾಗತೊಡಗಿದೆ.

 ಬಾಂಗ್ಲಾದಲ್ಲಿ ಕೊರೋನ ವೈರಸ್ನ 6 ಸಾವಿರ ಹೊಸ ಪ್ರಕರಣಗಳು ವರದಿಯಾಗಿದ್ದು, 108 ಮಂದಿ ಮೃತಪಟ್ಟಿದ್ದರು. ಭಾರತಕ್ಕೆ ತಾಗಿಕೊಂಡಿರುವ ಬಾಂಗ್ಲಾ ಗಡಿಯಲ್ಲಿ ಕೋವಿಡ್19 ಹಾವಳಿ ತೀವ್ರವಾಗಿದ್ದು, ಖುಲ್ನಾ ಹಾಗೂ ರಾಜಶಾಹಿ ನಗರಗಳ ಆಸ್ಪತ್ರೆಗಳು ಸೋಂಕಿತರರಿಂದ ತುಂಬಿತುಳುಕುತ್ತಿದೆಯೆಂದು ಅಧಿಕೃತ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News