112 ವರ್ಷದ ಎಮಿಲಿಯೊ ಫ್ಲೊರೆಸ್ ವಿಶ್ವದ ಹಿರಿಯಜ್ಜ
ಲಂಡನ್, ಜು.1:ಜಗತ್ತಿನ ಅತ್ಯಂತ ಹಿರಿಯ ವಯಸ್ಸಿನ ವ್ಯಕ್ತಿಯೆಂಬ ದಾಖಲೆ ಅಮೆರಿಕದ ಪೊರ್ಟೊರಿಕೋ ನಿವಾಸಿ, 112 ವರ್ಷ ವಯಸ್ಸಿನ ಎಮಿಲಿಯೊ ಫ್ಲೊರೆಸ್ ಮಾರ್ಕೆಝ್ ರ ಪಾಲಾಗಿದೆ. ಫ್ಲೊರೆಸ್ ಅವರಿಗೆ 112 ವರ್ಷ ಹಾಗೂ 326 ದಿನಗಳು ತುಂಬಿರುವುದಾಗಿ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಬುಧವಾರ ತಿಳಿಸಿದೆ.
ಮಾರ್ಕೋಝ್ ಅವರು ಅಮೆರಿಕದ ಕ್ಯಾರೋಲಿನ ರಾಜ್ಯದಲ್ಲಿ 1908ರಲ್ಲಿ ಜನಿಸಿದ್ದರು. ಬುಧವಾರ ತನ್ನ ಹುಟ್ಟೂರಿನಿಂದ ಕೆಲವೇ ಮೈಲುಗಳ ದೂರದಲ್ಲಿರುವ ಸ್ವಗೃಹದಲ್ಲಿ ಅವರನ್ನು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನ ಪ್ರತಿನಿಧಿಗಳು ಜಗತ್ತಿನ ಅತ್ಯಂತ ಹಿರಿಯ ವಯಸ್ಸಿನ ವ್ಯಕ್ತಿಯೆಂಬ ಪ್ರಮಾಣಪತ್ರವನ್ನು ನೀಡಿದರು. ತನ್ನ ಬಂಧುಮಿತ್ರರಿಂದ ‘ಡಾನ್ಮಿಲೋ’ಎಂದೇ ಕರೆಯಲ್ಪಡುವ ಮಾರ್ಕೆಝ್ ಪರರಲ್ಲಿ ದಯೆ, ಕಾರುಣ್ಯವನ್ನು ತೋರಿರುವುದೇ ತನ್ನ ದೀರ್ಘಾಯುಷ್ಯಕ್ಕೆ ಕಾರಣ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಭಾವುಕರಾಗಿ ಹೇಳಿದರು.
11 ಒಡಹುಟ್ಟಿದವರೊಂದಿಗೆ ಬೆಳೆದ ಮಾರ್ಕೆಝ್ ಅವರು ತಂದೆಗೆ ಪ್ರಥಮ ಮಗ. ಕುಟುಂಬದ ಕಬ್ಬಿನ ಹೊಲದಲ್ಲಿ ದುಡಿಯುತ್ತಿದ್ದ ಮಾರ್ಕೆಝ್ ಕೇವಲ ಮೂರು ವರ್ಷಗಳ ಕಾಲವಷ್ಟೇ ಶಾಲಾ ಶಿಕ್ಷಣ ಪಡೆದಿದ್ದರು.
ಮಾರ್ಕೆಝ್ ಅವರ ಪತ್ನಿ, 75 ವರ್ಷ ವಯಸ್ಸಿನ ಆ್ಯಂಡ್ರಿಯಾ ಪೆರೆಝ್ ಡೆ ಫ್ಲೋರ್ಸ್ 2010ರಲ್ಲಿ ಸಾವನ್ನಪ್ಪಿದ್ದು, ದಂಪತಿಗೆ ನಾಲ್ವರು ಮಕ್ಕಳಿದ್ದರು. ಈ ಹಿಂದೆ ರೊಮಾನಿಯಾ ಪ್ರಜೆ ಡುಮಿಟ್ರು ಕೊಮನೆಸ್ಕ್ ಅವರ ಜಗತ್ತಿನ ಅತ್ಯಂತ ಹಿರಿಯ ವಯಸ್ಸಿನ ಜೀವಂತ ವ್ಯಕ್ತಿಯೆಂದು ಗಿನ್ನೆಸ್ ಬುಕ್ ವರ್ಲ್ಡ್ ರೆಕಾರ್ಡ್ಸ್ ಪರಿಗಣಿಸಿತ್ತು. ಅವರು 2020ರ ಜೂನ್ 27ರಂದು ಮೃತಪಟ್ಟಿದ್ದರು. ಆಗ ಅವರಿಗೆ 111 ವರ್ಷ 219 ದಿನಗಳಾಗಿದ್ದವು.