ಫೆಲೆಸ್ತೀನ್: ಸಾಮಾಜಿಕ ಹೋರಾಟಗಾರ ನಿಝಾರ್ ಸಾವು ಅಸಹಜ: ತನಿಖಾ ಸಮಿತಿ ವರದಿ

Update: 2021-07-01 18:17 GMT

ಜೆರುಸಲೇಂ, ಜು.1: ಫೆಲೆಸ್ತೀನ್ ನ ಭಿನ್ನಮತೀಯ ನಾಯಕ ಹಾಗೂ ಸಾಮಾಜಿಕ ಹೋರಾಟಗಾರ ನಿಝಾರ್ ಬನಾತ್ ಅವರನ್ನು ದೈಹಿಕವಾಗಿ ಹಿಂಸಿಸಲಾಗಿದೆ ಮತ್ತು ಅವರ ಸಾವು ಅಸಹಜವೆಂದು ಫೆಲೆಸ್ತೀನ್ ಪ್ರಾಧಿಕಾರದ ನ್ಯಾಯಾಂಗ ಸಚಿವ ಹಾಗೂ ನಿಝಾರ್ ಅವರ ಸಾವಿನ ತನಿಖೆಗಾಗಿ ನಿಯೋಜಿತವಾದ ಸಮಿತಿಯ ಸದಸ್ಯ ಮುಹಮ್ಮದ್ ಅಲ್-ಶಲಾದೇಹ್ ತಿಳಿಸಿದ್ದಾರೆ. ಜೂನ್ 24ರಂದು ಸಾವನ್ನಪ್ಪಿದ 43 ವರ್ಷ ವಯಸ್ಸಿನ ಬನಾತ್ ದೈಹಿಕವಾಗಿ ಹಿಂಸೆಗೆ ಒಳಗಾಗಿದ್ದಾರೆಂಬುದು ಪ್ರಾಥಮಿಕ ವೈದ್ಯಕೀಯ ವರದಿ ತಿಳಿಸಿದೆಯೆಂದು ಮುಹಮ್ಮದ್ ಅಲ್-ಶಲಾದೆಹ್, ಫೆಲೆಸ್ತೀನ್ ಟವಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಹೆಬ್ರಾನ್ ನ ನಗರದಲ್ಲಿ ಫೆಲೆಸ್ತೀನ್ ಭದ್ರತಾ ಪಡೆಗಳು ಬನಾತ್ ರನ್ನು ಬಂಧಿಸಿದ ಸಂದರ್ಭದಲ್ಲಿ ಅವರು ಸಾವನ್ನಪ್ಪಿದ್ದರು. ಫೆಲೆಸ್ತೀನ್ ಪ್ರಾಧಿಕಾರದ ಪ್ರತಿಬಂಧಾತ್ಮಕ ಭದ್ರತಾ ಕೇಂದ್ರಕ್ಕೆ ಅವರನ್ನು ವರ್ಗಾಯಿಸಿದ ಸಂದರ್ಭದಲ್ಲಿ ಅವರು ಪ್ರಜ್ಞಾಹೀನರಾಗಿದ್ದರೆಂದು ಅಲ್ ಶಲಾದೆಹ್ ತಿಳಿಸಿದ್ದಾರೆ.

ಆನಂತರ ಭದ್ರತಾಸಿಬ್ಬಂದಿ ಬನಾತ್ ಅವರನ್ನು ಹೆಬ್ರಾನ್ನಲ್ಲಿರುವ ಅಲಿಯಾ ಸರಕಾರಿ ಆಸ್ಪತ್ರೆಗೆ ದಾಖಲಿಸಿದರು. ಆದರೆ ಆಸ್ಪತ್ರೆಗೆ ದಾಖಲಿಸುವ ಮೊದಲೇ ಅವರು ಕೊನೆಯುಸಿರೆಳೆದಿದ್ದಾರೆಂದು ಎಂದು ಶಲಾದೆಹ್ ತಿಳಿಸಿದ್ದಾರೆ. ಬನಾಟ್ ಅವರು ತೀವ್ರವಾದ ಹೃದಯ ಹಾಗೂ ಶ್ವಾಸಕೋಶ ವೈಫಲ್ಯದಿಂದಾಗಿ ಸಾವನ್ನಪ್ಪಿದ್ದಾರೆಂದು ಅವರು ಹೇಳಿದ್ದಾರೆ ತನಿಖಾ ಸಮಿತಿಯು ಅತ್ಯಂತ ಉದ್ದೇಶ ಪೂರ್ವಕವಾಗಿ, ನಿಷ್ಪಕ್ಷಪಾತ ಹಾಗೂ ಗೌಪ್ಯತೆಯೊಂದಿಗೆ ತನ್ನ ಕಾರ್ಯವನ್ನು ನಿರ್ವಹಿಸಿದ್ದು, ತನಿಖಾ ವರದಿಯನ್ನು ಫೆಲೆಸ್ತೀನ್ ಪ್ರಧಾನಿ ಮುಹಮ್ಮದ್ ಶತಾಯೆಹ್ ಅವರಿಗೆ ಹಸ್ತಾಂತರಿಸಲಾಗಿದೆ. ಪ್ರಧಾನಿಯವರು ಮುಂದಿನ ಕಾನೂನು ಕ್ರಮಗಳಿಗಾಗಿ ಸೇನಾ ನ್ಯಾಯಾಂಗದ ವರಿಷ್ಠರಿಗೆ ವರ್ಗಾಯಿಸಲಿದ್ದಾರೆ ಎಂದವರು ಹೇಳಿದ್ದರು.
 
ತನಿಖಾ ಸಮಿತಿಯ ವರದಿಯನ್ನು ಬನಾತ್ ಕುಟುಂಬಿಕರು ತಿರಸ್ಕರಿಸಿದ್ದಾರೆ. ಬನಾಟ್ ಅವರನ್ನು ಉದ್ದೇಶಪೂರ್ವಕವಾಗಿಯೇ ಫೆಲೆಸ್ತೀನ್ ಭದ್ರತಾಪಡೆಗಳು ಹತ್ಯೆ ಮಾಡಿವೆಯೆಂದು ಅವರು ಆರೋಪಿಸಿದ್ದಾರೆ. ಬನಾಟ್ ಅವರ ತಲೆ, ಎದೆ, ಕಂಠ, ಕಾಲುಗಳು ಹಾಗೂ ಕೈಗಳಿಗೆ ಥಳಿಸಲಾಗಿತ್ತು ಎಂದವರು ಹೇಳಿದ್ದಾರೆ.

ಬನಾಟ್ ನಿಝಾರ್ ಅವರನ್ನು ಹಾಸಿಗೆಯಿಂದ ಎಳೆದೊಯ್ದು ಕೊಲೆ ಮಾಡಲಾಗಿದೆ. ಕತ್ತಲಿನ ಮರೆಯಲ್ಲಿ ನಡೆಸಿದ ಈ ಹತ್ಯೆಯನ್ನು ನಡೆಸಿದ ಎಲ್ಲಾ ಭದ್ರತಾ ಸಿಬ್ಬಂದಿಯನ್ನು ಸಾರ್ವಜನಿಕವಾಗಿ ತನಿಖೆಗೊಳಪಡಿಸಬೇಕೆಂದು ಬನಾಟ್ ಅವರ ತಂದೆ ಖಲೀಲ್ ಬನಾಟ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News