ಭಾರತ, ಚೀನದೊಂದಿಗಿನ ಸಂಬಂಧ ಸಮತೋಲನಗೊಳಿಸುವ ಗುರಿ: ನೂತನ ರಾಷ್ಟ್ರೀಯ ಭದ್ರತಾ ಯೋಜನೆ ಪ್ರಕಟಿಸಿದ ರಶ್ಯಾ

Update: 2021-07-04 17:55 GMT

ಮಾಸ್ಕೋ, ಜು.4: ಅಮೆರಿಕನ್ ಡಾಲರ್ ಆಧಾರಿತ ವ್ಯವಹಾರಗಳನ್ನು ತ್ಯಜಿಸುವ ಮತ್ತು ಭಾರತ, ಚೀನಾದೊಂದಿಗಿನ ಸಂಬಂಧವನ್ನು ಸಮತೋಲನಗೊಳಿಸುವ ಉದ್ದೇಶ ಹೊಂದಿರುವ ನೂತನ ರಾಷ್ಟ್ರೀಯ ಭದ್ರತಾ ಕಾರ್ಯತಂತ್ರವನ್ನು ರಶ್ಯಾ ಪ್ರಕಟಿಸಿದೆ.

ಭಾರತ-ಚೀನಾ ನಡುವಿನ ಬಿಕ್ಕಟ್ಟು ಕಳೆದ ಒಂದು ವರ್ಷದಿಂದಲೂ ಮುಂದುವರಿದಿರುವ ಮಧ್ಯೆಯೇ ರಶ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಶನಿವಾರ ನೂತನ ರಾಷ್ಟ್ರೀಯ ಭದ್ರತಾ ಕಾರ್ಯತಂತ್ರವನ್ನು ಪ್ರಕಟಿಸಿದ್ದಾರೆ ಎಂದು ವರದಿಯಾಗಿದೆ.

ಭಾರತದೊಂದಿಗಿನ ವ್ಯೂಹಾತ್ಮಕ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ಜೊತೆಗೆ ಚೀನಾದೊಂದಿಗಿನ ಸಮಗ್ರ ಪಾಲುದಾರಿಕೆಯನ್ನು ಅಭಿವೃದ್ಧಿಗೊಳಿಸುವ ಉದ್ದೇಶವನ್ನು ಹೊಂದಲಾಗಿದೆ. ಏಶ್ಯಾ - ಪೆಸಿಫಿಕ್ ವಲಯದಲ್ಲಿ ಪ್ರಾದೇಶಿಕ ಸ್ಥಿರತೆ ಮತ್ತು ಭದ್ರತೆಯನ್ನು ಖಾತರಿಗೊಳಿಸುವ ಪ್ರಕ್ರಿಯೆಯನ್ನು ಆರಂಭಿಸುವ ಉದ್ದೇಶವಿದೆ ಎಂದು ರಶ್ಯಾದ ‘ಸ್ಪುಟ್ನಿಕ್’ ಸುದ್ಧಿಸಂಸ್ಥೆ ವರದಿ ಮಾಡಿದೆ.

ವಿಶ್ವದ ಅಣ್ವಸ್ತ್ರ ರಾಷ್ಟ್ರಗಳನ್ನು ಒಳಗೊಂಡ ಸ್ಥಳೀಯ ಶಸಸ್ತ್ರ ಸಂಘರ್ಷ ಪ್ರಾದೇಶಿಕ ಸಂಘರ್ಷವಾಗಿ ರೂಪುಗೊಳ್ಳುವ ಅಪಾಯವಿದೆ ಎಂದು ಭಾರತ-ಚೀನಾ ನಡುವಿನ ಬಿಕ್ಕಟ್ಟನ್ನು ನೂತನ ಕಾರ್ಯತಂತ್ರದಲ್ಲಿ ಪರೋಕ್ಷವಾಗಿ ಉಲ್ಲೇಖಿಸಲಾಗಿದೆ. ಅಂತರಾಷ್ಟ್ರೀಯ ವ್ಯವಹಾರದಲ್ಲಿ ಅಮೆರಿಕದ ಡಾಲರ್ ಬಳಕೆ ಕಡಿಮೆಗೊಳಿಸಿದರೆ ರಶ್ಯಾದ ಆರ್ಥಿಕ ಭದ್ರತೆಗೆ ಉತ್ತೇಜನ ದೊರಕುತ್ತದೆ ಎಂದು ಹೇಳಿದೆ. ವಿದೇಶದ ನಿರ್ಬಂಧ ಹಾಗೂ ಒತ್ತಡವನ್ನು ತಾಳಿಕೊಳ್ಳುವ ಸಾಮರ್ಥ್ಯ ತನಗಿರುವುದನ್ನು ರಶ್ಯಾ ಹಲವು ಬಾರಿ ಪ್ರದರ್ಶಿಸಿದೆ. ವಿದೇಶದ ಗುಪ್ತಚರ ಪಡೆಗಳ ನೆರವಿನಿಂದ ಕೆಲವು ದೇಶಗಳ ಸೇನೆಗಳು ರಶ್ಯಾದ ಪ್ರಮುಖ ಮೂಲಸೌಕರ್ಯವನ್ನು , ಮುಖ್ಯವಾಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ , ಹಾಳುಗೆಡವಲು ಪ್ರಯತ್ನಿಸಿದೆ. ಕೆಲವರ ಸ್ನೇಹಪರವಲ್ಲದ ಕ್ರಿಯೆಗಳು ರಶ್ಯದ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಗೆ ಬೆದರಿಕೆಯೊಡ್ಡುವಂತಿದ್ದರೆ ಅವನ್ನು ಸೂಕ್ತ ವಿಧಾನಗಳಿಂದ ಪ್ರತಿಬಂಧಿಸಬೇಕು ಎಂದು ರಾಷ್ಟ್ರೀಯ ಕಾರ್ಯನೀತಿಯಲ್ಲಿ ವಿವರಿಸಲಾಗಿದೆ

ಅಮೆರಿಕಾ ವಿರುದ್ಧ ವಾಗ್ಬಾಣ:

‘ಜಾಗತಿಕ ಅಭಿವೃದ್ಧಿ ಸಾಮರ್ಥ್ಯದ ಮರುಹಂಚಿಕೆ ಭೌಗೋಳಿಕ ರಾಜಕೀಯ ಅಸ್ಥಿರತೆ ಮತ್ತು ಬಿಕ್ಕಟ್ಟು ಹೆಚ್ಚಲು ಕಾರಣವಾಗಿದೆ. ತಮ್ಮ ನಿರ್ಬಂಧವಿಲ್ಲದ ನಾಯಕತ್ವವನ್ನು ಕಳೆದುಕೊಳ್ಳುತ್ತಿರುವ ದೇಶಗಳು ಇದನ್ನು ತಡೆಯುವ ನೆಪದಲ್ಲಿ ನ್ಯಾಯಸಮ್ಮತವಲ್ಲದ ಸ್ಪರ್ಧೆ, ಏಕಪಕ್ಷೀಯ ನಿರ್ಬಂಧ ವಿಧಿಸುವುದು ಅಥವಾ ಇತರ ದೇಶಗಳ ಆಂತರಿಕ ವಿಷಯದಲ್ಲಿ ಬಹಿರಂಗ ಹಸ್ತಕ್ಷೇಪದ ಮೂಲಕ ತಮ್ಮದೇ ನಿರಂಕುಶ ನಿಯಮ ಮತ್ತು ಅಧಿಪತ್ಯ ಸ್ಥಾಪಿಸಲು ಪ್ರಯತ್ನಿಸುತ್ತಿವೆ’ ಎಂದು ರಶ್ಯಾದ ನೂತನ ರಾಷ್ಟ್ರೀಯ ನೀತಿಯಲ್ಲಿ ಅಮೆರಿಕ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News