ಜಮ್ಮುಕಾಶ್ಮೀರ: ಪುನರ್ವಿಂಗಡಣಾ ಸಮಿತಿ ಸಭೆಗೆ ಗೈರಾಗಲು ಪಿಡಿಪಿ ನಿರ್ಧಾರ

Update: 2021-07-06 17:06 GMT

ಶ್ರೀನಗರ,ಜು.6: ಕೇಂದ್ರಾಡಳಿತ ಪ್ರದೇಶ ಜಮ್ಮುಕಾಶ್ಮೀರಕ್ಕೆ ಭೇಟಿ ನೀಡಲಿರುವ ಪುನರ್ವಿಂಗಡಣಾ ಆಯೋಗವು ಭೇಟಿ ನೀಡಿದ ಸಂದರ್ಭದಲ್ಲಿ ಅದರ ಸದಸ್ಯರನ್ನು ಭೇಟಿಯಾಗಲು ನೀಡಲಾದ ಆಹ್ವಾನವನ್ನು ಅಲ್ಲಿನ ಬಹುತೇಕ ರಾಜಕೀಯ ಪಕ್ಷಗಳು ಹಾಗೂ ನಾಗರಿಕ ಸಂಘಟನೆಗಳು ಸ್ವೀಕರಿಸಿವೆ. ಆದರೆ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ನೇತೃತ್ವದ ಪೀಪಲ್ಸ್ ಡೆಮಾಕ್ರಾಟಿಕ್ ಪಾರ್ಟಿ (ಪಿಡಿಪಿ)ಯು ಈ ಆಹ್ವಾನವನ್ನು ತಿರಸ್ಕರಿಸಿದೆ.

‘‘ ನಮ್ಮ ಪಕ್ಷವು ಪುನರ್ವಿಂಗಡಣಾ ಪ್ರಕ್ರಿಯೆಯಿಂ ದೂರವಿರಲು ನಿರ್ಧರಿಸಿದೆ ಹಾಗೂ ಅದು ಈ ಪ್ರಕ್ರಿಯೆಯ ಭಾಗವಾಗಿರುವುದಿಲ್ಲ. ಈ ಪುನರ್ವಿಂಗಡಣೆಯು ಪೂರ್ವಯೋಜಿತ ಉದ್ದೇಶದಿಂದ ಕೂಡಿದ್ದು, ನಮ್ಮ ಜನತೆಯ ಹಿತಾಸಕ್ತಿಗಳಿಗೆ ವಿರುದ್ಧವಾಗಿದೆ’’ ಎಂದು ಪಿಡಿಪಿ ಪ್ರಧಾನ ಕಾರ್ಯದರ್ಶಿ ಗುಲಾಂ ನಬಿ ಲೋನೆ ಹಂಜುರಾ ಅವರು ಆಯೋಗಕ್ಕೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಜಮ್ಮುಕಾಶ್ಮೀರಕ್ಕೆ ವಿಶೇಷ ಸ್ಥಾನ ಸ್ಥಾನಮಾನ ನೀಡುವ ಸಂವಿಧಾನದ 370 ನೇ ವಿಧಿಯನ್ನು ರದ್ದುಪಡಿಸಿರುವ ಕೇಂದ್ರದ ಕ್ರಮವು ಅಕ್ರಮ ಹಾಗೂ ಅಸಾಂವಿಧಾನಿಕವಾಗಿದೆ ಎಂದವರು ಹೇಳಿದ್ದಾರೆ. ಪುನರ್ವಿಂಗಡಣಾ ಪ್ರಕ್ರಿಯೆಯನ್ನು ನಡೆಸಲು ಆಯೋಗವು ಯಾವುದೇ ಸಾಂವಿಧಾನಿಕ ಹಾಗೂ ಕಾನೂನಾತ್ಮಕ ಜನಾದೇಶವನ್ನು ಹೊಂದಿಲ್ಲವೆಂದು ತನ್ನ ಪಕ್ಷವು ಭಾವಿಸುವುದಾಗಿ ಹಂಜುರಾ ಹೇಳಿದ್ದಾರೆ.
  
ನಿವೃತ್ತ ಸುಪ್ರೀಂಕೋರ್ಟ್ ನ್ಯಾಯಾಧೀಶ ರಂಜನಾ ಪ್ರಕಾಶ್ ದೇಸಾಯಿ ನೇತೃತ್ವದ ಪುನರ್ವಿಂಗಡಣಾ ಆಯೋಗವು ಜಮ್ಮುಕಾಶ್ಮೀರಕ್ಕೆ ನಾಲ್ಕು ದಿನಗಳ ಕಾಲ ಭೇಟಿ ನೀಡಲಿದ್ದು, ಈ  ಸಂದರ್ಭದಲ್ಲಿ ವಿವಿಧ ರಾಜಕೀಯ ಪಕ್ಷಗಳು, ಜಿಲ್ಲಾ ಚುನಾವಣಾ ಅಧಿಕಾರಿಗಳು ಹಾಗೂ ಸಂಬಂಧಪಟ್ಟವರ ಜೊತೆ ಸರಣಿ ಮಾತುಕತೆಗಳನ್ನು ನಡೆಸಲಿದೆ.


 ಜನಗಣತಿಯ ಆಧಾರದಲ್ಲಿ ಜಮ್ಮುಕಾಶ್ಮೀರದ ಲೋಕಸಭಾ ಹಾಗೂ ವಿಧಾನಸಭಾ ಕ್ಷೇತ್ರಗಳನ್ನು ಪುನರ್ವಿಂಗಡಣೆ ಮಾಡುವ ಉದ್ದೇಶವನ್ನು ಕೇಂದ್ರ ಸರಕಾರ ಹೊಂದಿದೆ. ಭಾರತದ ಏಕೈಕ ಮುಸ್ಲಿಂ ಬಹುಸಂಖ್ಯಾತ ರಾಜ್ಯವಾಗಿದ್ದ ಜಮ್ಮುಕಾಶ್ಮೀರದಲ್ಲಿ ತನ್ನ ಚುನಾವಣಾ ಲಾಭಕ್ಕಾಗಿ ಬಿಜೆಪಿಯು ಕ್ಷೇತ್ರಗಳ ಪುನರ್ವಿಂಗಡಣೆಯ ಅಸ್ತ್ರವನ್ನು ಪ್ರಯೋಗಿಸುತ್ತಿದೆಯೆಂದು ಅಲ್ಲಿನ ಬಹುತೇಕ ರಾಜಕೀಯ ಪಕ್ಷಗಳು ಆತಂಕ ವ್ಯಕ್ತಪಡಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News