ಅಫ್ಘಾನಿಸ್ತಾನವನ್ನು ಯಾರು ಆಳಬೇಕೆಂಬ ಕಾನೂನು ಸಮ್ಮತ ಅಂಶವನ್ನು ಕಡೆಗಣಿಸುವಂತಿಲ್ಲ: ಎಸ್.ಜೈಶಂಕರ್

Update: 2021-07-09 17:52 GMT

ಮಾಸ್ಕೋ,ಜು.9: ಅಫ್ಘಾನಿಸ್ತಾನದಲ್ಲಿ ಹೆಚ್ಚುತ್ತಿರುವ ಹಿಂಸಾಚಾರಗಳ ಬಗ್ಗೆ ಶುಕ್ರವಾರ ಕಳವಳ ವ್ಯಕ್ತಪಡಿಸಿರುವ ಭಾರತವು ಯುದ್ಧಸಂತ್ರಸ್ತ ದೇಶದಲ್ಲಿ ರಕ್ತಪಾತವನ್ನು ತಕ್ಷಣ ತಗ್ಗಿಸಲು ಕರೆ ನೀಡಿದೆಯಲ್ಲದೆ ಅಫ್ಘಾನಿಸ್ತಾನವನ್ನು ಯಾರು ಆಳಬೇಕೆಂಬ ಕಾನೂನುಸಮ್ಮತ ಅಂಶವು ಮಹತ್ವದ್ದಾಗಿದೆ ಮತ್ತು ಅದನ್ನು ಕಡೆಗಣಿಸುವಂತಿಲ್ಲ ಎಂದು ಒತ್ತಿ ಹೇಳಿದೆ.

ಇಲ್ಲಿ ರಷ್ಯಾದ ವಿದೇಶಾಂಗ ಸಚಿವ ಸೆರ್ಗಿ ಲಾವ್ರೋವ್ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಈ ವಿಚಾರವನ್ನು ವ್ಯಕ್ತಪಡಿಸಿದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ,ನಾವೀಗ ಅಫ್ಘಾನಿಸ್ತಾನದಲ್ಲಿನ ಬೆಳವಣಿಗೆಗಳು ಸಾಗುತ್ತಿರುವ ದಿಕ್ಕಿನ ಬಗ್ಗೆ ಕಳವಳಗೊಂಡಿದ್ದೇವೆ ಎಂದು ತಿಳಿಸಿದರು.
ಅಫ್ಘಾನಿಸ್ತಾನದಿಂದ ಅಮೆರಿಕ ಮತ್ತು ಮಿತ್ರಪಡೆಗಳ ಸಂಪೂರ್ಣ ಹಿಂದೆಗೆತಕ್ಕೆ ಮುನ್ನ ಇತ್ತೀಚಿನ ವಾರಗಳಲ್ಲಿ ತಾಲಿಬಾನ್ ಉಗ್ರರು ಹಲವಾರು ಜಿಲ್ಲೆಗಳನ್ನು ವಶಪಡಿಸಿಕೊಂಡು ಈಗ ದೇಶದ ಮೂರನೇ ಒಂದು ಭಾಗವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿರುವ ನಡುವೆಯೇ ಜೈಶಂಕರ್ ಅವರ ಈ ಹೇಳಿಕೆಗಳು ಹೊರಬಿದ್ದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News