ಕ್ಯೂಬಾ: ಸಾವಿರಾರು ಜನರಿಂದ ಸರಕಾರ ವಿರೋಧಿ ಪ್ರತಿಭಟನೆ‌

Update: 2021-07-12 17:24 GMT

ಹವಾನ (ಕ್ಯೂಬಾ), ಜು. 12: ಕ್ಯೂಬಾದಲ್ಲಿ ರವಿವಾರ ಸಾವಿರಾರು ಮಂದಿ ರಸ್ತೆಗಿಳಿದು ಸರಕಾರ ವಿರೋಧಿ ಪ್ರತಿಭಟನೆಗಳನ್ನು ನಡೆಸಿದ್ದಾರೆ. ಜನರು ಪ್ರತಿಭಟನೆಯ ವೇಳೆ ‘ಸರ್ವಾಧಿಕಾರ ಕೊನೆಯಾಗಲಿ’ ಮತ್ತು ‘ನಮಗೆ ಸ್ವಾತಂತ್ರ್ಯ ಬೇಕು’ ಎಂಬ ಘೋಷಣೆಗಳನ್ನು ಕೂಗಿದ್ದಾರೆ.


ಕ್ಯೂಬಾ ಎಂಬ ಕಮ್ಯುನಿಸ್ಟ್ ದೇಶದಲ್ಲಿ ಸರಕಾರ ವಿರೋಧಿ ಪ್ರತಿಭಟನೆಗಳು ನಡೆಯುವುದು ತೀರಾ ವಿರಳವಾಗಿದೆ. ದೇಶದಲ್ಲಿ ಹೆಚ್ಚುತ್ತಿರುವ ಕೊರೋನ ವೈರಸ್ ಸಾಂಕ್ರಾಮಿಕ ಮತ್ತು ತೀವ್ರಗೊಳ್ಳುತ್ತಿರುವ ಆರ್ಥಿಕ ಬಿಕ್ಕಟ್ಟಿನಿಂದಾಗಿ ಜನರು ನಿರಾಶರಾಗಿದ್ದಾರೆ.

ರಾಜಧಾನಿ ಹವಾನದಿಂದ ನೈರುತ್ಯದಲ್ಲಿರುವ ಸಾನ್ ಆಂಟೋನಿಯೊ ಡಿ ಲೊಸ್ ಬಾನೊಸ್ ಎಂಬ ಪಟ್ಟಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಭಾಗವಹಿಸಿದ್ದರು. ಅವರು ಅಧ್ಯಕ್ಷ ಮಿಗುಯೆಲ್ ಡಿಯಾಝ್ ಕಾನಲ್ ವಿರುದ್ಧ ಘೋಷಣೆಗಳನ್ನು ಕೂಗಿದರು.

ಹವಾನಾದಲ್ಲಿಯೂ ಸಾವಿರಾರು ಮಂದಿ ಪ್ರತಿಭಟಿಸಿದರು. ಬಳಿಕ ಪಾಲ್ಮ ಸೊರಿಯಾನೊ ಮತತು ಸಾಂಟಿಯಾಗೊ ಡಿ ಕ್ಯೂಬಾ ಎಂಬ ಪಟ್ಟಣಗಳಲ್ಲಿಯೂ ಪ್ರತಿಭಟನೆಗಳು ನಡೆದವು.

ಸಂಜೆ ದೇಶವನ್ನುದ್ದೇಶಿಸಿ ಭಾಷಣ ಮಾಡಿದ ಅಧ್ಯಕ್ಷ ಡಿಯಾಝ್ ಕಾನಲ್, ದೇಶದಲ್ಲಿ ಅಮೆರಿಕ ಅಶಾಂತಿಯನ್ನು ಹುಟ್ಟು ಹಾಕುತ್ತಿದೆ ಎಂದು ಆರೋಪಿಸಿದರು. ಕ್ಯೂಬಾದ ಕ್ರಾಂತಿಯನ್ನು ಬೆಂಬಲಿಸುವವರು ದೇಶವನ್ನು ಬೆಂಬಲಿಸಲು ಮುಂದೆ ಬರುವಂತೆಯೂ ಅವರು ಕರೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News