ಆಕ್ರಮಿತ ಪೆಲೆಸ್ತೀನ್ ನಲ್ಲಿ ಇಸ್ರೇಲ್ ನಡೆಸುವ ಧ್ವಂಸ ಕಾರ್ಯಾಚರಣೆ ಕ್ರೂರ, ಕಾನೂನು ಬಾಹಿರ

Update: 2021-07-13 18:39 GMT
photo:twitter/@UN_HRC

ನ್ಯೂಯಾರ್ಕ್, ಜು.13: ಇಸ್ರೇಲ್ ಆಕ್ರಮಿತ ಪೆಲೆಸ್ತೀನ್ ಪ್ರಾಂತ್ಯದಲ್ಲಿರುವ ಬೆಡೋಯಿನ್ ಸಮುದಾಯದವರ ಮನೆಗಳನ್ನು ಇಸ್ರೇಲ್ ಅಧಿಕಾರಿಗಳು ಪದೇ ಪದೇ ನೆಲಸಮಗೊಳಿಸುತ್ತಿರುವುದು ಕ್ರೂರ ಮತ್ತು ಕಾನೂನುಬಾಹಿರ ಕೃತ್ಯವಾಗಿದೆ ಎಂದು ವಿಶ್ವಸಂಸ್ಥೆಯ ವಿಶೇಷ ಅಧಿಕಾರಿ ಮೈಕೆಲ್ ಲಿಂಕ್ ಖಂಡಿಸಿದ್ದಾರೆ. ‌

ಆಕ್ರಮಿತ ವೆಸ್ಟ್ಬ್ಯಾಂಕ್(ಪಶ್ಚಿಮದಂಡೆ) ಪ್ರಾಂತ್ಯದಲ್ಲಿ ನಡೆಸುತ್ತಿರುವ ಆಸ್ತಿನಾಶ ಕೃತ್ಯವನ್ನು ತಕ್ಷಣ ನಿಲ್ಲಿಸಿ ಅಂತರಾಷ್ಟ್ರೀಯ ಮಾನವಹಕ್ಕು ಕರ್ತವ್ಯ ಮತ್ತು ಮಾನವೀಯತೆಗೆ ಸಂಪೂರ್ಣ ಬದ್ಧತೆ ತೋರಿಸಬೇಕು ಮತ್ತು ಅಲ್ಲಿನ ಸಂರಕ್ಷಿತ ಜನಸಮುದಾಯದ ರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ವಿಶ್ವಸಂಸ್ಥೆಯ ಸ್ವತಂತ್ರ ಮಾನವಹಕ್ಕು ತಜ್ಞರೂ ಆಗಿರುವ ಲಿಂಕ್ ಆಗ್ರಹಿಸಿದ್ದಾರೆ. ಇಸ್ರೇಲ್ ಆಕ್ರಮಿತ ಪೆಲೆಸ್ತೀನ್ ಪ್ರಾಂತ್ಯಕ್ಕೆ ವಿಶ್ವಸಂಸ್ಥೆಯ ವಿಶೇಷ ಮಾನವಹಕ್ಕು ಪ್ರತಿನಿಧಿಯಾಗಿ ಲಿಂಕ್ ಕಾರ್ಯನಿರ್ವಹಿಸುತ್ತಿದ್ದಾರೆ. 

ವಿಶೇಷ ಪ್ರತಿನಿಧಿಗಳು ವಿಶ್ವಸಂಸ್ಥೆಯ ಸಿಬಂದಿಗಳಲ್ಲ ಅಥವಾ ಅವರಿಗೆ ವೇತನ ಪಾವತಿಸುವುದಿಲ್ಲ. ಇವರು ವಿಶ್ವಸಂಸ್ಥೆಯ ಪರವಾಗಿ ಸ್ವತಂತ್ರವಾಗಿ ಮತ್ತು ಸ್ವಯಂಸೇವಕರಾಗಿ ಕೆಲಸ ಮಾಡುತ್ತಾರೆ. ಇಸ್ರೇಲ್ ತನ್ನ ಕಾನೂನುಬದ್ದ ಕರ್ತವ್ಯವನ್ನು ಪಾಲಿಸುವುದನ್ನು ಖಾತರಿಪಡಿಸಲು ಅಂತರಾಷ್ಟ್ರೀಯ ಸಮುದಾಯ ಅರ್ಥಪೂರ್ಣ ಜವಾಬ್ದಾರಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿರುವ ಅವರು, ಈ ಹಿಂದೆಯೂ ಪರಿಣಾಮವಿಲ್ಲದ ಟೀಕೆಗಳು ಇಸ್ರೇಲ್ನ ಕಾನೂನುಬಾಹಿರ ಕೃತ್ಯಕ್ಕೆ ಅಂತ್ಯಹಾಡಿಲ್ಲ. 

ಆದ್ದರಿಂದ ಕೃತ್ಯಕ್ಕೆ ಹೊಣೆಗಾರನನ್ನಾಗಿ ಮಾಡುವುದು ಅಂತರಾಷ್ಟ್ರೀಯ ಸಮುದಾಯದ ಪ್ರಮುಖ ಅಜೆಂಡಾ ಆಗಿರಬೇಕು. ಇಂತಹ ಅಕ್ರಮ ಸ್ವಾಧೀನಪಡಿಸಿಕೊಳ್ಳುವಿಕೆಗೆ ಇಸ್ರೇಲ್ ಸೂಕ್ತ ಬೆಲೆ ತೆರುವಂತಾದರೆ ಮಾತ್ರ ಇಂತಹ ಅನ್ಯಾಯ ಕೊನೆಯಾಗಬಹುದು ಎಂದವರು ಹೇಳಿದ್ದಾರೆ. ಜೋರ್ಡಾನ್ ಕಣಿವೆಯಲ್ಲಿರುವ ಹಮ್ಸಾ ಅಲ್ಬಖಾಯದ ಪೆಲೆಸ್ತೀನ್ ಬೆಡೋಯಿನ್ ಸಮುದಾಯದವರ ಆಸ್ತಿ ಪಾಸ್ತಿಯನ್ನು ಇಸ್ರೇಲ್ ಪಡೆಗಳು ಜುಲೈ 7ರಂದು ಧ್ವಂಸಗೊಳಿಸಿದೆ. 

ಅಂತರಾಷ್ಟ್ರೀಯ ಸಮುದಾಯದ ನೆರವಿನಿಂದ ನಿರ್ಮಿಸಿದ ತಾತ್ಕಾಲಿಕ ಮನೆಗಳು, ಕೃಷಿ ಕ್ಷೇತ್ರಗಳು ಇದರಲ್ಲಿ ಸೇರಿವೆ. 2020ರ ನವೆಂಬರ್ ಬಳಿಕ ಈ ಪ್ರಾಂತ್ಯದಲ್ಲಿ 7ನೇ ಬಾರಿ ನೆಲಸಮಗೊಳಿಸುವ ಕಾರ್ಯಾಚರಣೆ ನಡೆದಿದೆ. ಸುಮಾರು 81 ತಾತ್ಕಾಲಿಕ ಮನೆ, ಕೃಷಿ ಕ್ಷೇತ್ರ ನೆಲಸಮವಾಗಿದ್ದು 35 ಮಕ್ಕಳ ಸಹಿತ 70ಕ್ಕೂ ಅಧಿಕ ಜನರು ಈಗ ನೆಲೆಸಲು ಮನೆ, ನೀರು, ಬಟ್ಟೆ, ಆಹಾರವಿಲ್ಲದೆ ಬೀದಿಯಲ್ಲಿ ದಿನಕಳೆಯುವಂತಾಗಿದೆ ಎಂದು ವರದಿಯಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News