×
Ad

ಸರಕಾರಿ ವಿರೋಧಿ ಪ್ರತಿಭಟನೆ ನಿಯಂತ್ರಣದ ಉದ್ದೇಶ: ಸಾಮಾಜಿಕ ಮಾಧ್ಯಮ ಆ್ಯಪ್ ನಿರ್ಬಂಧಿಸಿದ ಕ್ಯೂಬಾ

Update: 2021-07-14 23:44 IST

ಹವಾನಾ, ಜು.14: ದಶಕದಲ್ಲೇ ಅತ್ಯಂತ ಬೃಹತ್ ಸರಕಾರಿ ವಿರೋಧಿ ಪ್ರತಿಭಟನೆಯ ಹಿನ್ನೆಲೆಯಲ್ಲಿ ಕ್ಯೂಬಾ ಸರಕಾರ, ಫೇಸ್ಬುಕ್, ವಾಟ್ಸ್ಯಾಪ್ ಸೇರಿದಂತೆ ಸಾಮಾಜಿಕ ಮಾಧ್ಯಮ ಮತ್ತು ಸಂದೇಶ ರವಾನಿಸುವ ವೇದಿಕೆಗಳ ಬಳಕೆಯನ್ನು ನಿಷೇಧಿಸಿದೆ ಎಂದು ವರದಿಯಾಗಿದೆ. ಕ್ಯೂಬಾದಲ್ಲಿ ಫೇಸ್ಬುಕ್, ವಾಟ್ಸ್ಯಾಪ್, ಇನ್ಸ್ಟಾಗ್ರಾಮ್ ಮತ್ತು ಟೆಲಿಗ್ರಾಮ್ ವೇದಿಕೆಗಳ ಸೇವೆಯಲ್ಲಿ ಸೋಮವಾರ ಮತ್ತು ಮಂಗಳವಾರ ಆಂಶಿಕ ಅಡಚಣೆಯಾಗಿದೆ ಎಂದು ಲಂಡನ್ ಮೂಲದ ಜಾಗತಿಕ ಇಂಟರ್ನೆಟ್ ಮೇಲ್ವಿಚಾರಣಾ ಸಂಸ್ಥೆ ‘ನೆಟ್ಬ್ಲಾಕ್ಸ್’ ಹೇಳಿದೆ. 

ದೇಶದಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟು ತಲೆದೋರಿದ್ದು ಮೂಲ ಆಹಾರ ವಸ್ತುಗಳ ಕೊರತೆ ಮತ್ತು ವಿದ್ಯುತ್ ಪೂರೈಕೆಗೆ ತೊಡಕಾಗಿರುವ ಹಿನ್ನೆಲೆಯಲ್ಲಿ ರವಿವಾರ ನಡೆದ ಸರಕಾರಿ ವಿರೋಧಿ ಪ್ರತಿಭಟನೆಯಲ್ಲಿ ಸಾವಿರಾರು ಮಂದಿ ಸೇರಿದ್ದರು. ಜೊತೆಗೆ, ಸರಕಾರ ಕೊರೋನ ಸೋಂಕು ನಿರ್ವಹಣೆಯಲ್ಲಿ ವಿಫಲವಾಗಿದೆ ಮತ್ತು ನಾಗರಿಕರ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗಿದೆ ಎಂದು ದೇಶದೆಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. 

ಅಮೆರಿಕದಿಂದ ಆರ್ಥಿಕ ನೆರವು ಪಡೆದ ಪ್ರತಿಕ್ರಾಂತಿಕಾರಿಗಳ ಗುಂಪು ಈ ಪ್ರತಿಭಟನೆ ಆಯೋಜಿಸಿದೆ ಎಂದು ಕ್ಯೂಬಾ ಸರಕಾರ ಹೇಳಿದೆ. ಕ್ರಾಂತಿಯನ್ನು ಸಮರ್ಥಿಸಿಕೊಳ್ಳಲು ಬೀದಿಗಿಳಿದು ಹೋರಾಡುವಂತೆ ಅಧ್ಯಕ್ಷ ಮಿಗುವೆಲ್ ಡಯಾರ್ಕ್ಯಾನೆಲ್ ಸರಕಾರದ ಬೆಂಬಲಿಗರಿಗೆ ಕರೆ ನೀಡಿದ್ದರು. ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಿ ಪ್ರತಿಭಟನಾಕಾರರನ್ನು ಚದುರಿಸಲಾಗಿದೆ ಎಂದು ಸರಕಾರದ ಮೂಲಗಳು ಹೇಳಿವೆ. ಈ ಮಧ್ಯೆ, ಸೋಮವಾರ ರಾತ್ರಿ ದಕ್ಷಿಣ ಹವಾನಾದ ಉಪನಗರ ಲಾ ಗ್ಯುನೆರಾದಲ್ಲಿ ಮತ್ತೊಂದು ಪ್ರತಿಭಟನೆ ಭುಗಿಲೆದ್ದಿದ್ದು , ಈ ಸಂದರ್ಭದ ಹಿಂಸಾಚಾರದಲ್ಲಿ ಓರ್ವ ಮೃತನಾಗಿದ್ದಾನೆ. ಭದ್ರತಾ ಸಿಬಂದಿ ಸಹಿತ ಹಲವರು ಗಾಯಗೊಂಡಿರುವುದಾಗಿ ವರದಿಯಾಗಿದೆ. 

ಸಾಮಾಜಿಕ ವೇದಿಕೆಯ ಮೂಲಕ ಪ್ರತಿಭಟನೆಗೆ ಜನರನ್ನು ಸಂಘಟಿಸುವುದು, ಪ್ರತಿಭಟನೆಯ ಮಾಹಿತಿ ಹಂಚಿಕೊಳ್ಳುವುದನ್ನು ತಡೆಯುವ ಉದ್ದೇಶದಿಂದ ನಿಷೇಧ ಹೇರಿರುವ ಸಾಧ್ಯತೆಯಿದೆ. ಇದೇ ವೇಳೆ, ಸಹಜ ಸ್ಥಿತಿಯಿದೆ ಎಂದು ಬಿಂಬಿಸಲು ಕೆಲವು ಸಂಪರ್ಕಗಳನ್ನು ಉಳಿಸಿಕೊಳ್ಳಲಾಗಿದೆ ಎಂದು ನೆಟ್‌ ಬ್ಲಾಕ್ಸ್‌ ನ ನಿರ್ದೇಶಕ ಆಲ್ಪ್ ಟೋಕರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News