ಇಮ್ರಾನ್ ಖಾನ್ ಸಮ್ಮುಖದಲ್ಲೇ ಪಾಕಿಸ್ತಾನವನ್ನು ತರಾಟೆಗೆತ್ತಿಕೊಂಡ ಅಪಘಾನ್ ಅಧ್ಯಕ್ಷ

Update: 2021-07-17 18:28 GMT

ಮಾಸ್ಕೋ, ಜು.17: ಅಪಘಾನಿಸ್ತಾನದೊಳಗೆ ವಿದೇಶಿ ಉಗ್ರರ ಒಳನುಸುಳುವಿಕೆಗೆ ಪಾಕಿಸ್ತಾನ ಅವಕಾಶ ನೀಡಿದೆ ಎಂದು ಅಪಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಸಮ್ಮುಖದಲ್ಲೇ ತೀವ್ರ ತರಾಟೆಗೆತ್ತಿಕೊಂಡ ಘಟನೆ ರಶ್ಯಾದ ತಾಷ್ಕೆಂಟ್ ನಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಪ್ರಾದೇಶಿಕ ಸಮಾವೇಶದ ವೇದಿಕೆಯಲ್ಲಿ ನಡೆದಿದೆ ವರದಿಯಾಗಿದೆ. ಶಾಂತಿ ಮಾತುಕತೆಯಲ್ಲಿ ಗಂಭೀರವಾಗಿ ತೊಡಗಿಕೊಳ್ಳುವಂತೆ ತಾಲಿಬಾನ್ ಗಳ ಮೇಲೆ ಪಾಕಿಸ್ತಾನ ಪ್ರಭಾವ ಬೀರುವಲ್ಲಿ ವಿಫಲವಾಗಿದೆ. 

ಅಪಘಾನಿಸ್ತಾನದೊಳಗೆ ಸುಮಾರು 10,000ಕ್ಕೂ ಅಧಿಕ ಜಿಹಾದಿ ಹೋರಾಟಗಾರರು ಕಳೆದ ತಿಂಗಳು ಪಾಕಿಸ್ತಾನ ಹಾಗೂ ಇತರ ಪ್ರದೇಶಗಳಿಂದ ನುಸುಳಿರುವುದಾಗಿ ಗುಪ್ತಚರ ವರದಿ ಬಂದಿದೆ. ಗಡಿ ದಾಟಲು ಉಗ್ರರು ನಡೆಸುವ ಪ್ರಯತ್ನವನ್ನು ತಡೆಯುವುದಾಗಿ ನೀಡಿದ್ದ ಭರವಸೆಯನ್ನು ಈಡೇರಿಸುವಲ್ಲಿ ಪಾಕ್ ವಿಫಲವಾಗಿದೆ ಎಂದು ಘನಿ ಹೇಳಿದರು. 

‘ಸೆಂಟ್ರಲ್ ಆ್ಯಂಡ್ ಸೌತ್ ಏಶ್ಯಾ: ರೀಜನಲ್ ಕನೆಕ್ಟಿವಿಟಿ, ಚಾಲೆಂಜಸ್ ಆ್ಯಂಡ್ ಅಪೊರ್ಚುನಿಟೀಸ್’ ಎಂಬ ಈ ಸಮಾವೇಶದಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್, ಚೀನಾದ ವಿದೇಶ ವ್ಯವಹಾರ ಇಲಾಖೆ ಸಚಿವ ವಾಂಗ್ ಯಿ, ಭಾರತದ ವಿದೇಶ ವ್ಯವಹಾರ ಸಚಿವ ಎಸ್ ಜೈಶಂಕರ್, ರಶ್ಯಾದ ವಿದೇಶ ಸಚಿವ ಸೆರ್ಗೆಯ್ ಲಾವ್ರೊವ್, ಹಾಗೂ ಹಲವು ದೇಶಗಳ ಮುಖಂಡರು ಪ್ರತಿನಿಧಿಗಳು ಪಾಲ್ಗೊಂಡಿದ್ದರು. 

ಅಪಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತವಿರುವುದು ಪಾಕಿಸ್ತಾನದ ಹಿತಾಸಕ್ತಿಗೂ ತೊಡಕಾಗಿರುವುದರಿಂದ , ತಾಲಿಬಾನ್ ಶಾಂತಿ ಮಾತುಕತೆಯಲ್ಲಿ ಪಾಲ್ಗೊಳ್ಳುವಂತೆ ತನ್ನ ಪ್ರಭಾವ ಬಳಸುತ್ತೇವೆ ಎಂಬ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹಾಗೂ ಅವರ ಸೇನಾ ಮುಖಂಡರ ಭರವಸೆಗೆ ವಿರುದ್ಧವಾಗಿ, ತಾಲಿಬಾನ್ ಗಳನ್ನು ಬೆಂಬಲಿಸುವ ಸಂಘಟನೆಗಳು ಅಪಘಾನಿಸ್ತಾನದಲ್ಲಿ ಮುಕ್ತವಾಗಿ ಸಾರ್ವಜನಿಕ ಆಸ್ತಿಪಾಸ್ತಿ ಧ್ವಂಸಗೊಳಿಸಿ ಸಂಭ್ರಮಾಚರಿಸುತ್ತಿದ್ದಾರೆ ಎಂದು ಘನಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News