ಅಪಘಾನ್ ನಲ್ಲಿ ಮುಂದುವರಿದ ಸಂಘರ್ಷ, ಹಿಂಸಾಚಾರ: ಕಂದಹಾರ್ ನಲ್ಲಿ ಕರ್ಫ್ಯೂ ಜಾರಿ

Update: 2021-07-17 18:29 GMT

ಕಾಬೂಲ್, ಜು.17: ಅಪಘಾನ್ ಪಡೆ ಹಾಗೂ ತಾಲಿಬಾನ್ ನಡುವಿನ ಸಂಷರ್ಘದ ಬಳಿಕ ಕಂದಹಾರ್ ನಲ್ಲಿ ಭುಗಿಲೆದ್ದ ಹಿಂಸಾಚಾರ ನಿಯಂತ್ರಣಕ್ಕೆ ಕಂದಹಾರ್ನಲ್ಲಿ ಕರ್ಫ್ಯೂ ಜಾರಿಯಾಗಿದೆ ಎಂದು ವರದಿಯಾಗಿದೆ. ರಾತ್ರಿ 9ರಿಂದ ಬೆಳಿಗ್ಗೆ 5ರವರೆಗೆ ನಿರ್ಬಂಧ ಜಾರಿಯಲ್ಲಿದ್ದು, ದೇಶದ ಇತರ ಪ್ರದೇಶಗಳಲ್ಲಿ ವಾಸಿಸುತ್ತಿರುವವರು ಮುಂದಿನ ಸೂಚನೆಯವರೆಗೆ ನಗರಕ್ಕೆ ಆಗಮಿಸಬಾರದು ಎಂದು ಕಂದಹಾರ್ ಮಿಲಿಟರಿ ಭದ್ರತಾ ಸಮಿತಿ ಸಲಹೆ ನೀಡಿದೆ ಎಂದು ಸುದ್ಧಿಸಂಸ್ಥೆ ವರದಿ ಮಾಡಿದೆ. 

ಪಾಕಿಸ್ತಾನದೊಂದಿಗಿನ ಗಡಿಭಾಗದಲ್ಲಿರುವ ಬೋಲ್ಡಕ್ ನಗರದಲ್ಲಿ ತಾಲಿಬಾನ್ನೊಂದಿಗಿನ ಸಂಘರ್ಷದಲ್ಲಿ ಕಂದಹಾರ್ ವಿಶೇಷ ಪಡೆಯ ಕಮಾಂಡರ್ ಸಿದ್ದೀಕ್ ಕರ್ಝಾಯ್ ಹತರಾದ ಹಿನ್ನೆಲೆಯಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದೆ. ಕಂದಹಾರ್ನ ಮೇಲೆ ನಿಯಂತ್ರಣ ಸಾಧಿಸಲು ಪ್ರಯತ್ನಿಸುತ್ತಿರುವ ತಾಲಿಬಾನ್ ಪಡೆಗಳು ನಡೆಸುತ್ತಿರುವ ನಿರಂತರ ದಾಳಿಯನ್ನು ಹಿಮ್ಮೆಟ್ಟಿಸಲು ಕಮಾಂಡೊ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಸರಕಾರ ಹೇಳಿದೆ.
 ‌
ಅಪಘಾನಿಸ್ತಾನದಿಂದ ಅಮೆರಿಕ ಪಡೆಗಳನ್ನು ವಾಪಸು ಕರೆಸಿಕೊಳ್ಳುವ ಪ್ರಕ್ರಿಯೆ ಆರಂಭವಾದಂದಿನಿಂದ ಅಲ್ಲಿ ತಾಲಿಬಾನ್ ಹಲವು ಪ್ರಾಂತ್ಯಗಳನ್ನು ಕೈವಶ ಮಾಡಿಕೊಂಡಿದೆ ಎಂದು ಮೂಲಗಳು ಹೇಳಿವೆ. ಈ ಮಧ್ಯೆ, ಅಪಘಾನ್ ಪಡೆಗಳಿಗೆ ನೆರವಾಗುವಂತೆ ನೆರೆಹೊರೆಯ ದೇಶಗಳೊಂದಿಗೆ ಅಮೆರಿಕದ ಅಧಿಕಾರಿಗಳು ಮಾತುಕತೆ ಆರಂಭಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News