ಯುರೋಪಿಯನ್ ಯೂನಿಯನ್ ಆಕ್ಷೇಪದ ಮಧ್ಯೆಯೇ ಉತ್ತರ ಸಿಪ್ರಸ್ ಗೆ ಅಧಿಕೃತ ಭೇಟಿಗೆ ಟರ್ಕಿ ಅಧ್ಯಕ್ಷರ ನಿರ್ಧಾರ

Update: 2021-07-18 17:44 GMT

ಅಂಕಾರಾ, ಜು.18: ಸ್ವಯಂ ಘೋಷಿತ ಟರ್ಕಿಷ್ ರಿಪಬ್ಲಿಕ್ ಆಫ್ ನಾರ್ಥರ್ನ್ ಸಿಪ್ರಸ್(ಟಿಆರ್ಎನ್ಸಿ) ದೇಶಕ್ಕೆ ತಾನು ಸೋಮವಾರದಿಂದ 2 ದಿನಗಳ ಅಧಿಕೃತ ಭೇಟಿ ನೀಡಲಿದ್ದು ಈ ಸಂದರ್ಭ ಶುಭ ಸುದ್ಧಿಯೊಂದನ್ನು ನೀಡಲಿದ್ದೇನೆ ಎಂದು ಟರ್ಕಿ ಅಧ್ಯಕ್ಷ ರಿಸೆಪ್ ಎರ್ಡೋಗನ್ ಹೇಳಿದ್ದಾರೆ. 

ಆದರೆ ಈ ಭೇಟಿಯು ಗ್ರೀಸ್ ದೇಶಗಳು ಹಾಗೂ ಯುರೋಪಿಯನ್ ಯೂನಿಯನ್ ನಡುವಿನ ಭಿನ್ನಮತವನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆಯಿದೆ. ಸಿಪ್ರಸ್ನ ಬಿಕ್ಕಟ್ಟಿಗೆ 2 ದೇಶಗಳ ಪರಿಹಾರ ಸೂಕ್ತ ಎಂಬುದು ಟರ್ಕಿ ನಿಲುವಾಗಿದ್ದರೆ ಯುರೋಪಿಯನ್ ಯೂನಿಯನ್ ದೇಶಗಳು ಇದನ್ನು ತಳ್ಳಿಹಾಕಿವೆ. ಮಂಗಳವಾರ, ಸಿಪ್ರಸ್ನಲ್ಲಿ ಟರ್ಕಿಯ ಸೇನಾ ಹಸ್ತಕ್ಷೇಪದ 47ನೇ ವಾರ್ಷಿಕೋತ್ಸವ ದಿನಾಚರಣೆಯಲ್ಲಿ ಎರ್ಡೋಗನ್ ಪಾಲ್ಗೊಂಡು, ಉತ್ತರ ಸಿಪ್ರಸ್ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಭಾಷಣ ಮಾಡಲಿದ್ದಾರೆ ಎಂದು ವರದಿಯಾಗಿದೆ. 

ಉತ್ತರ ಸಿಪ್ರಸ್ನಲ್ಲಿ ಆಯೋಜಿಸಿರುವ ಕಾರ್ಯಕ್ರಮದ ಮೂಲಕ ಈ ದ್ವೀಪರಾಷ್ಟ್ರದಲ್ಲಿ ಮತ್ತು ವಿಶ್ವದಲ್ಲಿ ಶಾಂತಿಯ ವಾತಾವರಣ ಸ್ಥಾಪಿಸುವ ನಿಟ್ಟಿನಲ್ಲಿ ಸೂಕ್ತ ಸಂದೇಶ ನೀಡುತ್ತೇವೆ ಎಂಬ ವಿಶ್ವಾಸವಿದೆ. ಇದೊಂದು ಉತ್ತಮ ಉಪಕ್ರಮವಾಗಿದ್ದು ನಾವು ಪೂರ್ವ ಸಿದ್ಧತೆ ಪೂರ್ಣಗೊಳಿಸಿದ್ದೇವೆ ಎಂದು ಎರ್ಡೋಗನ್ ಹೇಳಿದ್ದಾರೆ. 

ಸಿಪ್ರಸ್ನಲ್ಲಿ ಗ್ರೀಕ್ ದೇಶಗಳ ಬೆಂಬಲದಿಂದ ನಡೆದ ಕ್ರಾಂತಿಯ ಬಳಿಕ ಆ ದೇಶದಲ್ಲಿ ಟರ್ಕಿ ಸೇನೆಯ ಹಸ್ತಕ್ಷೇಪ ನಡೆದು 1974ರಲ್ಲಿ ದೇಶ ಇಬ್ಬಾಗವಾಗಿತ್ತು. 1960ರ ಒಪ್ಪಂದದ ಪ್ರಕಾರ, ತಾನು ಹಸ್ತಕ್ಷೇಪ ನಡೆಸಿ ವಿವಾದಕ್ಕೆ ಶಾಂತಿಯುತ ಪರಿಹಾರ ರೂಪಿಸಿರುವುದಾಗಿ ಟರ್ಕಿ ಹೇಳುತ್ತಿದೆ(1960ರಲ್ಲಿ ಸಿಪ್ರಸ್ ಗಣರಾಜ್ಯ ಸ್ಥಾಪನೆಯಾದ ಸಂದರ್ಭದ ಒಪ್ಪಂದದಂತೆ, ಯಾವುದೇ ವಿವಾದ ಕಾಣಿಸಿಕೊಂಡರೆ ಗ್ರೀಸ್, ಟರ್ಕಿ ಮತ್ತು ಬ್ರಿಟನ್ ದೇಶಗಳು ಹಸ್ತಕ್ಷೇಪ ನಡೆಸಬಹುದಾಗಿದೆ). 

1983ರಲ್ಲಿ ಟಿಆರ್ಎನ್ಸಿ ಸ್ಥಾಪನೆಯಾದಂದಿನಿಂದ , ಉತ್ತರದ ಭಾಗವನ್ನು ‘ಸಿಪ್ರಸ್ನ ಆಕ್ರಮಿತ ಪ್ರದೇಶ’ ಎಂದು ವಿಶ್ವಸಂಸ್ಥೆಯ ಭದ್ರತಾ ಸಮಿತಿ ವ್ಯಾಖ್ಯಾನಿಸಿದೆ. ಈ ದೇಶಕ್ಕೆ ಟರ್ಕಿ ಮಾತ್ರ ಮಾನ್ಯತೆ ನೀಡಿದೆ. ದಕ್ಷಿಣದ ದ್ವೀಪಸಮೂಹದ ಮೇಲೆ ನಿಯಂತ್ರಣ ಹೊಂದಿರುವ ಸಿಪ್ರಸ್ ಗಣರಾಜ್ಯ 2004ರಲ್ಲಿ ಯುರೋಪಿಯನ್ ಒಕ್ಕೂಟದ ಸದಸ್ಯತ್ವ ಪಡೆದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News